ಕಾರವಾರ: ಕಡಲ ತೀರದ ತಿಮ್ಮಕ್ಕ ಗಾರ್ಡನ್ ಗೆ ಬಂದ ವಲಸೆ ಹಕ್ಕಿಯೊಂದನ್ನು ಪರಿಶೀಲಿಸಿದಾಗ ಬೆನ್ನಿನ ಭಾಗದಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್ ಪತ್ತೆಯಾಗಿದೆ. ಭಿನ್ನವಾಗಿ ಕಂಡ ಈ ಹಕ್ಕಿಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಇದರಿಂದ ನೌಕಾನೆಲೆಯ ಬಗ್ಗೆ ಚೀನಾ ಗೂಢಚರ್ಯೆ ನಡೆಸುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಸೀಗಲ್ ಹಕ್ಕಿ ಜಾತಿಗೆ ಸೇರಿದ ಈ ವಲಸೆ ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್‌ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ವಿಳಾಸ ಪತ್ತೆಯಾಗಿದೆ. ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ‍್ಯಾಕರ್ ಬಳಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಇರಿಸಲಾಗಿದೆ. ಕಳೆದ ವರ್ಷ ನವಂಬರ್‌ನಲ್ಲೂ ಕಾರವಾರ ಬೈತಕೋಲ್ ಬಂದರಿನಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪ್ರತ್ಯಕ್ಷವಾಗಿತ್ತು.ಇದು ಸಹ ಇವುಗಳ ಅಧ್ಯಯನಕ್ಕೆ ಬಳಕೆ ಮಾಡಿರುವುದು ತಿಳಿದುಬಂದಿತ್ತು. ಆದರೇ ಅಧ್ಯಯನದ ನೆಪದಲ್ಲಿ ಕಾರವಾರ ಭಾಗದಲ್ಲಿ ಇರುವ ಕದಂಬ ನೌಕಾನೆಲೆಯ ರಹಸ್ಯ ಸೋರಿಕೆಯ ಆತಂಕ ಕಾಡುತ್ತಿದೆ. ಇದೀಗ ಸಿಕ್ಕಿರುವ ಸೀಗಲ್ ಟ್ರ್ಯಾಕರ್ ಚೀನಾದ್ದಾಗಿರುವುದರಿಂದ ಇನ್ನಷ್ಟು ತಲ್ಲಣ ಸೃಷ್ಟಿಸಿದೆ.

0 Comments