ಕಾಸರಗೋಡು : ಕಣ್ಣೂರಿನ ಪಿಣರಾಯಿಯಲ್ಲಿ ನಾಡಬಾಂಬ್ ತಯಾರಿಸುವ ವೇಳೆ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಇಂದು ಅಪರಾಹ್ನ ನಡೆದ ಘಟನೆಯಲ್ಲಿ ಸಿಪಿಎಂ ಕಾರ್ಯಕರ್ತ ವಿಪಿನ್ ರಾಜ್ ಎಂಬವರ ಕೈ ಛಿದ್ರಗೊಂಡಿದ್ದು ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತಪಾಸಣೆ ನಡೆಯುತ್ತಿದೆ. ಗಾಯಾಳು ವಿಪಿನ್ ರಾಜ್ ಮೊನ್ನೆ ನಡೆದ ಸ್ಥಳೀಯಾಡಳಿತ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಕಚೇರಿಗೆ ನಾಡ ಬಾಂಬ್ ಎಸೆದ ಪ್ರಕರಣದ ಆರೋಪಿ ಎನ್ನಲಾಗಿದೆ. ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯ ಐದು ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಮತ ಎಣಿಕೆಯ ಬಳಿಕ ಗಲಭೆ ಸೃಷ್ಟಿಯಾಗಿ ಹಿಂಸಾಚಾರ ನಡೆದಿತ್ತು. ಈ ನಡುವೆ ನಾಡ ಬಾಂಬ್ ಸ್ಫೋಟ ನಡೆದಿರುವುದು ನಿಗೂಢತೆ ಸೃಷ್ಠಿಸಿದೆ.

0 Comments