ಮಂಜೇಶ್ವರ : ಕೇರಳ ಚುನಾವಣೆ ದಿನದ ಕ್ಷಣಗಣನೆ ಪೂರ್ತಿಗೊಳ್ಳುತ್ತಿರುವ ನಡುವೆ ಕೊನೆಯ ಕ್ಷಣದಲ್ಲಿ ಮಂಜೇಶ್ವರ ಮಂಡಲ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಪರ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು ರಾಜ್ಯ, ರಾಷ್ಟ್ರೀಯ ಮಟ್ಟದ ನೇತಾರರು ಪಾಲ್ಗೊಳ್ಳುತ್ತಿರುವುದು ಅಂತಿಮ ಹಂತದ ಪ್ರಚಾರಕ್ಕೆ ಇನ್ನಷ್ಟು ಕಳೆ ಬಂದಿದೆ. ಆದಿತ್ಯವಾರ ಸಂಜೆ ಹೊಸಂಗಡಿ ಸಮೀಪದ ವರ್ಕಾಡಿಯ ಧರ್ಮನಗರದಲ್ಲಿ ನಡೆದ ಯುಡಿಎಎಫ್ ನ ಬಹಿರಂಗ ಸಭೆಯಲ್ಲಿ ಕಿಕ್ಕಿರಿದ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡಿದ್ದರು.
ಕರ್ನಾಟಕ ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಭಾಷಣಗಾರರಾಗಿ ಆಗಮಿಸಿ ನೆರೆದ ಜನರನ್ನು ಉದ್ದೇಶಿಸಿ ಸಂವಾದ ಶೈಲಿಯಲ್ಲಿ ಮಾತನಾಡುತ್ತಾ ಎಕೆಎಂ ಅಶ್ರಫ್ ಗೆ ಜನ ಬೆಂಬಲ ಕೋರಿದರು. ಇದು ರಾಷ್ಟ್ರಕವಿ ಗೋವಿಂದ ಪೈ, ಕಯ್ಯಾರ ಕಿಂಞಣ್ಣ ರೈಗಳ ನಾಡು. ಕರ್ನಾಟಕದೊಂದಿಗೆ ಇರಬೇಕಾಗಿದ್ದ ನಾಡು. ಆದರೆ ದುರಾದೃಷ್ಟವಶಾತ್ ಕೇರಳದಲ್ಲಿದ್ದರೂ, ಕರ್ನಾಟಕ ನಿಮ್ಮ ಜೊತೆಗಿದೆ. ನಮಗೆ ಹೊಕ್ಕುಳ ಬಳ್ಳಿಯ ಸಂಬಂಧವಿದೆ. ಆದ್ದರಿಂದಲೇ ಗಡಿನಾಡ ಕನ್ನಡಿಗರು ಸಾಮರಸ್ಯದ ಬದುಕಿಗಾಗಿ ಯುಡಿಎಫ್ ಬೆಂಬಲಿಸಬೇಕೆಂದು ಸಿಎಂ ನುಡಿದರು. ಕೇರಳದ ಏಕೈಕ ಕನ್ನಡ ಶಾಸಕ ಎಕೆಎಂ ಅಶ್ರಫ್ ಅವರನ್ನು ಕನ್ನಡ ಜನತೆ ಬಹುಮತದಿಂದ ಪುನರಾಯ್ಕೆ ಮಾಡಿದರೆ ನಾನಿಲ್ಲಿಗೆ ಬಂದುದಕ್ಕೆ ಸಾರ್ಥಕ ಎಂದರು.
2019ರಲ್ಲೂ ನಾನಿದೇ ವರ್ಕಾಡಿಗೆ ಬಂದು ಮಾತನಾಡಿದ್ದೆ ಎಂಬುದನ್ನು ನೆನಪಿಸಿಕೊಂಡ ಅವರು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಮತ್ತು ಮಂಜೇಶ್ವರಕ್ಕೆ ಅದೇ ಸರ್ಕಾರದ ಶಾಸಕನನ್ನು ಈ ನೆಲದ ಕನ್ನಡಿಗರೂ ಒಳಗೊಂಡಂತೆ ಸಕಲರೂ ಆರಿಸಬೇಕೆಂದು ವಿನಂತಿಸಿಕೊಂಡರು. ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ ಸಹಿತ ಐದು ಭಾಗ್ಯ ಯೋಜನೆಗಳ ಗ್ಯಾರಂಟಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ಟೀಕಿಸಿ ವಿಮರ್ಶಿಸಿತ್ತು. ಇದು ಅನುಷ್ಟಾನ ಮಾಡಲಾಗದ ಯೋಜನೆ ಎಂದಿದ್ದರು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಯಾರು ಟೀಕಿಸಿದ್ದಾರೋ ಅವರೇ ಬಳಿಕ ಉಚಿತ ಯೋಜನೆಗಳನ್ನು ನಕಲು ಮಾಡಿದ್ದಾರೆ. ಈಗ ಕೇರಳದಲ್ಲೂ ಇಂದಿರಾ ಗ್ಯಾರಂಟಿ ಘೋಷಿಸಿದ್ದೇವೆ. ಮಹಿಳೆಯರು ಆರಾಮದಿಂದ ಓಡಾಡುವ ದಿನಗಳು ಬರಲಿದೆ ಎಂದವರು ಹೇಳಿದರು.
ಮಂಜೇಶ್ವರ ಮಂಡಲ ಯುಡಿಎಫ್ ಸಂಚಾಲಕ ಮಂಜುನಾಥ ಆಳ್ವ ಮಡ್ವ ಅಧ್ಯಕ್ಷತೆ ವಹಿಸಿದರು. ಯುಡಿಎಫ್ ಆಧ್ಯಕ್ಷ ಅಝೀಝ್ ಮರಿಕ್ಕೆ ಸ್ವಾಗತಿಸಿದರು. ಕರ್ನಾಟಕ ಸಚಿವ ಬೋಸರಾಜ್, ಸಂಸದ ರಾಜಮೋಹನ ಉಣ್ಣಿತ್ತಾನ್, ವಿನಯಕುಮಾರ್ ಸೊರಕೆ, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕಾಸರಗೋಡು ಡಿಸಿಸಿ ಅಧ್ಯಕ್ಷ ಫೈಝಲ್, ನಾಯಕರಾದ ಬಾಲಕೃಷ್ಣನ್ ಪೆರಿಯ, ಸೋಮಶೇಖರ್ ಜೆ. ಎಸ್, ಲಕ್ಷ್ಮಣ ಪ್ರಭು ಕುಂಬಳೆ, ಹರ್ಷಾದ್ ವರ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.


.jpeg)
0 Comments