ಕೊಚ್ಚಿ : ಪೆರುಂಬಾವೂರು ನೆಡುಂಗಪ್ರದಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ನೆಡುಂಗಪ್ರ ನಿವಾಸಿ ಬೇಸಿಲ್ ಟಿ. ಏಲಿಯಾಸ್ ಮತ್ತು ಪಿಂಕಿ ದಂಪತಿಯ ಪುತ್ರ ಜೋಶುವಾ ಮೃತಪಟ್ಟ ಬಾಲಕ. ಕೋಟಪ್ಪಡಿ–ಕುರುಪ್ಪಂಪಡಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ ಅಪಘಾತ ಸಂಭವಿಸಿದೆ.
ಜೋಶುವಾ ತನ್ನ ತಂದೆಯೊಂದಿಗೆ ಮನೆಯ ಸಮೀಪದ ಅಂಗಡಿಗೆ ಸಾಮಗ್ರಿಗಳನ್ನು ಖರೀದಿಸಲು ತೆರಳಿದ್ದನು. ಅಂಗಡಿಯಿಂದ ವಾಪಸ್ ಬರುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ಲಾರಿಯ ಚಕ್ರದಡಿ ಸಿಲುಕಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟಿಪ್ಪರ್ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

0 Comments