Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಐಫೋನ್ ಇಎಂಐ ವಿಚಾರಕ್ಕೆ ವಾಗ್ವಾದ : ಒಂದೇ ಕುಟುಂಬದ ಮೂವರ ದಾರುಣ ಸಾವು

ಛತ್ರಪತಿ ಸಂಭಾಜಿನಗರ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಿನ್ನೆ 18 ವರ್ಷದ ಯುವಕನೊಬ್ಬ ತಾನು ಖರೀದಿಸಿದ್ದ ಐಫೋನ್ 15 ಪ್ರೊ ಮೊಬೈಲ್‌ನ ಇಎಂಐ (EMI) ಕಂತು ಪಾವತಿಸಲು ಸಾಧ್ಯವಾಗದೆ, ಕುಟುಂಬದೊಂದಿಗೆ ಗಲಾಟೆ ಮಾಡಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ರಕ್ಷಿಸಲು ಹೋದ ತಂದೆ ಮತ್ತು ಆ ಘಟನೆ ಕಣ್ಣೆದುರಲ್ಲೇ ನಡೆದಿದ್ದನ್ನು ಸಹಿಸದ ತಾಯಿಯೂ ಪ್ರಪಾತಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾರೆ. 

ಮೃತರನ್ನು ಕುನಾಲ್ ಚಂದಗುಡೆ(18), ತಂದೆ ಮುರಳೀಧರ್ ಚಂದಗುಡೆ(48) ಮತ್ತು ತಾಯಿ ಸಂಗೀತಾ ಎಂದು ಗುರುತಿಸಲಾಗಿದೆ. ಈ ಕುಟುಂಬವು ನಗರದ ಜಲ್ಟಾ ಫಾಟಾ ಪ್ರದೇಶದಲ್ಲಿ ವಾಸಿಸುತ್ತಿತ್ತು.

ಪೊಲೀಸರು ನೀಡಿರುವ ಮಾಹಿತಿಯಂತೆ,  ಕುನಾಲ್ ಇತ್ತೀಚೆಗೆ ಐಫೋನ್ ಖರೀದಿಸಿದ್ದು, ಅದರ ಮಾಸಿಕ ಕಂತು (EMI) ಪಾವತಿಸಲು ಆತನ ಬಳಿ ಹಣವಿರಲಿಲ್ಲ. ಕಂತಿನ ಹಣಕ್ಕಾಗಿ ತಂದೆ ಮುರಳೀಧರ್ ಚಂದಗುಡೆ ಅವರೊಂದಿಗೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ತೀವ್ರ ಕೋಪಗೊಂಡ ಕುನಾಲ್ ಮನೆಯಿಂದ ಹೊರಟು, ವಾಲುಜ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಸ್ಗಾಂವ್ ಬಳಿಯ ಬೆಟ್ಟವೇರಿದ್ದನು.

ಮಾಹಿತಿ ತಿಳಿದು ಸ್ಥಳೀಯರು ಹಾಗೂ ಮಾಜಿ ಸರಪಂಚ ಸಂಜಯ್ ಜಾಧವ್ ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿ ಯುವಕನನ್ನು ಮನವೊಲಿಸಲು ಹಲವು ಗಂಟೆಗಳ ಕಾಲ ಪ್ರಯತ್ನಿಸಿದ್ದರು. ಕುಟುಂಬದವರಿಗಾಗಿ ಬದುಕಬೇಕು ಹಾಗೂ ಮನೆಗೆ ಮರಳಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.

ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಗ ನಿಂತಿದ್ದ ಅಂಚಿಗೆ ಹೋದ ತಂದೆ ಮುರಳೀಧರ್ ಆತನನ್ನು ಎಳೆದುಕೊಳ್ಳಲು ಯತ್ನಿಸಿದಾಗ, ಇಬ್ಬರೂ ಸಮತೋಲನ ತಪ್ಪಿ ಆಳವಾದ ಕಲ್ಲುಗಣಿಗೆ ಬಿದ್ದರು. ಮಗ ಮತ್ತು ಪತಿ ಬೀಳುವುದನ್ನು ಕಂಡ ತಾಯಿ ಸಂಗೀತಾ ಕೂಡ ಕೆಲವೇ ಕ್ಷಣಗಳಲ್ಲಿ ಪ್ರಪಾತಕ್ಕೆ ಜಿಗಿದಿದ್ದಾರೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ವಾಲುಜ್ ಎಂಐಡಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿದ್ದರೆ ತಕ್ಷಣ ಸಹಾಯ ಪಡೆಯಿರಿ. ದಿಶಾ ಸಹಾಯವಾಣಿ: 1056. ಮೈತ್ರಿ ಕೊಚ್ಚಿ: 0484-2540530.ನ್ನು ಸಂಪರ್ಕಿಸಬಹುದು.

Post a Comment

0 Comments

ಜಾಹೀರಾತು

Responsive Advertisement