Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣ : ಗುತ್ತಿಗೆ ಕೈತಪ್ಪಿದ್ದಕ್ಕೆ 10 ಲಕ್ಷ ರೂ. ಸುಪಾರಿ

ಉಡುಪಿ : ಮದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಮೇಲಿನ ಶೂಟ್‌ಔಟ್ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ದೊರೆತಿದೆ. ಅದಾನಿ ಯುಪಿಸಿಎಲ್ ಕಂಪನಿಯ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕೈತಪ್ಪಿದ ಆಕ್ರೋಶದಲ್ಲಿ ಉಚ್ಚಿಲದ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ, ತನ್ನ ಸಹೋದರ ಹಾಗೂ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಕೊಲೆ ಸಂಚು ರೂಪಿಸಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಕಿಶೋರ್ ಪೂಜಾರಿ ಈ ಹಿಂದೆ ಯುಪಿಸಿಎಲ್‌ನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಸುಮಾರು ಆರು ತಿಂಗಳ ಹಿಂದೆ ಎರ್ಮಾಳಿನ ಯುಪಿಸಿಎಲ್ ಪೈಪ್‌ಲೈನ್ ಹಾಗೂ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ತನಗೆ ನೀಡುವಂತೆ ಕೋರಿದ್ದ. ಆದರೆ ಕಂಪನಿ ಗುತ್ತಿಗೆಯನ್ನು ಡೇವಿಡ್ ಡಿಸೋಜ ಅವರಿಗೆ ನೀಡಿತ್ತು. ಇದರಿಂದ ಆಕ್ರೋಶಗೊಂಡ ಕಿಶೋರ್, ಡೇವಿಡ್ ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು, ಅನ್ಮೋಲ್, ಜಿಯಾಹುಲ್ ಸೇರಿದಂತೆ ಹಣಕಾಸಿನ ನೆರವು ನೀಡಿದ ಮೊಹಮ್ಮದ್ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರನ್ನು ಬಂಧಿಸಲಾಗಿದೆ. ಬಿಹಾರದ ಸೂರಜ್ ನೀಡಿದ ಮಾಹಿತಿಯ ಆಧಾರದ ಮೇಲೆ ಮುಂಬೈನ ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್‌ನನ್ನು ಬೆಳಗಾವಿಯ ನಿಪ್ಪಾಣಿಯಲ್ಲಿ ಬಂಧಿಸಲಾಗಿದೆ.

ಆರೋಪಿಯನ್ನು ಉಡುಪಿಗೆ ಕರೆತರುತ್ತಿದ್ದ ವೇಳೆ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅನುಜ್, ಕೊಲ್ಲೂರು ಎಸ್‌ಐ ಅವರ ಆಯುಧ ಕಸಿದು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಕುಂದಾಪುರ ಎಸ್‌ಐ ನಂಜ ನಾಯ್ಕ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಅನುಜ್‌ನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನುಜ್ ಪಾಟೀಲ್ ವಿರುದ್ಧ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

Post a Comment

0 Comments

ಜಾಹೀರಾತು

Responsive Advertisement