Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಣ್ಮಕಜೆ ಪಂಚಾಯತಿನಲ್ಲಿ ಪೌಷ್ಟಿಕಾಹಾರದ ಬಗ್ಗೆ ಪೋಷಣ್ ಮಾಸಾಚರಣೆಯ ಅಂಗವಾಗಿ ಸೆಕ್ಟರ್ ಮಟ್ಟದ ಕಾರ್ಯಕ್ರಮ

ಪೆರ್ಲ : ಮಕ್ಕಳ ಪೌಷ್ಟಿಕತೆ, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ಮತ್ತು ಸಮತೋಲಿತ ಆಹಾರದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಡೆಯುತ್ತಿರುವ 'ಪೋಷಣ್ ಮಾಹ್ - 2026'ರ ಅಂಗವಾಗಿ ಸೆಕ್ಟರ್ ಮಟ್ಟದ ಕಾರ್ಯಕ್ರಮವನ್ನು ಮಂಗಳವಾರ ಪಂಚಾಯತ್ ಹಾಲ್‌ನಲ್ಲಿ ಆಯೋಜಿಸಲಾಯಿತು. ಸೆಪ್ಟೆಂಬರ್ 9ರಿಂದ ಅಕ್ಟೋಬರ್ 8ರವರೆಗೆ ನಡೆಯುವ ಪೋಷಣ್ ಮಾಸಾಚರಣೆಯ ಭಾಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ., "ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಂತ ಅಗತ್ಯವಾಗಿದ್ದು, ಕುಟುಂಬದ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ; ಪೋಷಣ್ ಮಾಸಾಚರಣೆಯನ್ನು ಕೇವಲ ಒಂದು ತಿಂಗಳ ಕಾರ್ಯಕ್ರಮವಾಗಿ ಸೀಮಿತಗೊಳಿಸದೆ, ವರ್ಷಪೂರ್ತಿ ಆರೋಗ್ಯಕರ ಆಹಾರ ಮತ್ತು ಪೌಷ್ಟಿಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು" ಎಂದು ಅವರು ಕರೆ ನೀಡಿದರು.

ಎಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಖ್ ವೊಳಮುಗರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,  "ಕುಟುಂಬದ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಮೂಲಾಧಾರವಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಪೋಷಕರು ವಿಶೇಷ ಗಮನ ಹರಿಸಬೇಕು. ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿ, ಹಣ್ಣು, ಬೇಳೆಕಾಳು ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪಂಚಾಯತ್ ವ್ಯಾಪ್ತಿಯಲ್ಲಿ ಪೌಷ್ಟಿಕತೆ ಹಾಗೂ ಆರೋಗ್ಯದ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸಲು ಅಗತ್ಯ ಸಹಕಾರ ನೀಡಲಾಗುವುದು" ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಂಜೇಶ್ವರ ಹೆಚ್ಚುವರಿ ಸಿಡಿಪಿಒ ಪ್ರೀತಾ ಎನ್. ಭಾಗವಹಿಸಿದ್ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ  ವಿಜಯ, ಪಂಚಾಯತ್ ಸದಸ್ಯರಾದ ನಳಿನಾಕ್ಷಿ ಹಾಗೂ ಪುಷ್ಪಾವತಿ  ಶುಭಾಶಂಸನೆಗೈದರು. ಪೆರ್ಲದ ಜೆಎಚ್‌ಐ ಹರಿದಾಸ್ ಅವರು ಸಂಪನ್ಮೂಲ ವ್ಯಕ್ತಿಯಾಗಿ  ಪೌಷ್ಟಿಕ ಆಹಾರ, ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯ ಸಂರಕ್ಷಣೆಯ ಕುರಿತು ತರಗತಿ ನಡೆಸಿದರು. ಐಸಿಡಿಎಸ್ ಸೂಪರ್‌ವೈಸರ್ ಲಿಸಿ ಪಿ.ಜೆ. ಸ್ವಾಗತಿಸಿ, ಐಸಿಡಿಎಸ್ ಸೂಪರ್‌ವೈಸರ್ ಅನಿತಾ ಪಿ.ಎಂ. ವಂದಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Post a Comment

0 Comments

ಜಾಹೀರಾತು

Responsive Advertisement