Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ವರ್ಷದಲ್ಲಿ 7,918 ಮಂದಿಗೆ ಪ್ರಾಣಿಗಳ ಕಡಿತ : 5,303 ಮಂದಿಗೆ ಬೀದಿನಾಯಿ ಕಡಿತ : ಒಬ್ಬರು ರೇಬಿಸ್‌ಗೆ ಬಲಿ

ಕಾಸರಗೋಡು : ಜಿಲ್ಲೆಯಾದ್ಯಂತ ಬೀದಿನಾಯಿಗಳ ಹಾವಳಿ ತೀವ್ರಗೊಂಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ಪ್ರಾಣಿಗಳ ಕಡಿತಕ್ಕೆ ಒಳಗಾಗಿ 7,918 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 5,303 ಮಂದಿ ನಾಯಿ ಕಡಿತಕ್ಕೆ ಒಳಗಾದವರಾಗಿದ್ದಾರೆ. ರೇಬಿಸ್ ಸೋಂಕಿಗೆ ಒಳಗಾಗಿ ಒಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಪ್ರಾಣಿಗಳ ಕಡಿತದ ಪ್ರಕರಣಗಳಲ್ಲಿ ಬಹುಪಾಲು ನಾಯಿ ಮತ್ತು ಬೆಕ್ಕುಗಳಿಂದಲೇ ಸಂಭವಿಸುತ್ತಿದ್ದು, ಸುಮಾರು 99ರಷ್ಟು ಪ್ರಕರಣಗಳಲ್ಲಿ ರೇಬಿಸ್ ಅಪಾಯಕ್ಕೆ ನಾಯಿ–ಬೆಕ್ಕುಗಳೇ ಪ್ರಮುಖ ಕಾರಣವಾಗಿವೆ. ಇದಲ್ಲದೆ ಕೋತಿ, ಅಳಿಲು, ನರಿ ಹಾಗೂ ತೋಳಗಳ ಕಡಿತದಿಂದಲೂ ರೇಬಿಸ್ ಸೋಂಕು ಹರಡುವ ಸಾಧ್ಯತೆ ಇದೆ.

ಸಾಕುನಾಯಿಗಳಿಗಿಂತ ಬೀದಿನಾಯಿಗಳ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರಮುಖ ಸ್ಥಳಗಳಲ್ಲಿಯೂ ಬೀದಿನಾಯಿಗಳ ಸಂಚಾರ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜಿಲ್ಲಾ ಆಸ್ಪತ್ರೆಯ ಆವರಣದೊಳಗೇ ನಾಯಿ ಕಡಿತದ ಘಟನೆ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಯಿ ಕಡಿತ ಹಾಗೂ ರೇಬಿಸ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

Post a Comment

0 Comments

ಜಾಹೀರಾತು

Responsive Advertisement