ಪುತ್ತೂರು : ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥ ಕಾಮಗಾರಿಯಿಂದ ಸಂಪರ್ಕ ರಸ್ತೆ ಹಾಳಾಗಿ, ಸುಮಾರು ಒಂದು ವರ್ಷದಿಂದ ಮನೆಯಿಂದ ಹೊರಬರಲಾಗದೆ ಸಂಕಷ್ಟ ಅನುಭವಿಸುತ್ತಿದ್ದ ವೃದ್ಧ ದಂಪತಿಯ ಸಮಸ್ಯೆಗೆ ಕೊನೆಗೂ ಪರಿಹಾರದ ಭರವಸೆ ದೊರೆತಿದೆ.
ಉಪ್ಪಿನಂಗಡಿಯ ಗಾಂಧಿ ಪಾರ್ಕ್‌ನ ನಿವಾಸಿ ಗಿಲ್ಬರ್ಟ್ ಆಂಥೋನಿ ಮೆನೆಜಸ್ (78) ಹಾಗೂ ಅವರ 73 ವರ್ಷದ ಅನಾರೋಗ್ಯಪೀಡಿತ ಪತ್ನಿ ಕಳೆದ ಒಂದು ವರ್ಷದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಪತ್ನಿಯನ್ನು ಆಗಾಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದ್ದರೂ, ಮನೆಗೆ ವಾಹನ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ವೇಳೆ ಮನೆಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಹಾಳಾಗಿದ್ದು, ದಂಪತಿಯ ಸಂಕಷ್ಟದ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರ ದೊರೆತಿರಲಿಲ್ಲ. ಈ ಬಗ್ಗೆ ಮಾಧ್ಯಮಗಳು ಸಮಸ್ಯೆಯನ್ನು ಬೆಳಕಿಗೆ ತಂದಿದ್ದು, ಇದನ್ನು ಗಮನಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವೃದ್ಧ ದಂಪತಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಎನ್‌ಎಚ್‌ಎಐ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರನ್ನು ಕಚೇರಿಗೆ ಕರೆಸಿ, ಕಾಮಗಾರಿಯಿಂದ ಸಂಕಷ್ಟಕ್ಕೊಳಗಾದ ದಂಪತಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸೂಚಿಸಿದರು.
ಇದರ ಹಿನ್ನೆಲೆಯಲ್ಲಿ ಜಾವೇದ್ ಅಜ್ಮಿ ಅವರು ಸೋಮವಾರ ಸಂಜೆ ಉಪ್ಪಿನಂಗಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸಂಪರ್ಕಕ್ಕೆ ಅಡ್ಡಿಯಾಗಿರುವ ನೆರೆಹೊರೆಯವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಲಾಗುವುದು ಹಾಗೂ ವೃದ್ಧ ದಂಪತಿಯ ಮನೆಗೆ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್ ರಘುನಾಥ್ ರೆಡ್ಡಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

0 Comments