ಕುಂಬಳೆ : ಪೆರ್ಮುದೆ ಸಮೀಪದ ಪೆರಿಯಡ್ಕದಲ್ಲಿರುವ ಕಾರ್ ವರ್ಕ್‌ಶಾಪ್ ವೊಂದರಲ್ಲಿ ಅಕ್ರಮ ಪ್ರವೇಶ ಹಾಗೂ ದಾಂಧಲೆ ನಡೆದಿದ್ದು, ವರ್ಕ್‌ಶಾಪ್ ಮುಂಭಾಗ ನಿಲ್ಲಿಸಿದ್ದ ನಾಲ್ಕು ಕಾರುಗಳ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಗೈದ ಘಟನೆ ಶನಿವಾರ ರಾತ್ರಿ ನಡೆದಿದೆ. ಟಿ. ರೋಹಿತಾಕ್ಷ ಅವರ ಮಾಲೀಕತ್ವದ ಆದ್ಯ ಆಟೋಮೊಬೈಲ್ಸ್ ವರ್ಕ್‌ಶಾಪ್ ನಲ್ಲಿ ಈ ಘಟನೆ ನಡೆದಿದೆ. ಇದೇ ವರ್ಕ್‌ಶಾಪ್‌ನಲ್ಲಿ ಕೆಲ ದಿನಗಳ ಹಿಂದೆ ನಿಲ್ಲಿಸಿದ್ದ ಕಾರೊಂದಕ್ಕೆ ಬೆಂಕಿ ಹಚ್ಚಿ ನಾಶಪಡಿಸಲಾಗಿತ್ತು. ಇದೀಗ ನಾಲ್ಕು ಕಾರುಗಳ ಗಾಜುಗಳನ್ನು ಒಡೆದಿರುವುದೂ ಅದೇ ವ್ಯಕ್ತಿಯ ಕೃತ್ಯವಾಗಿರಬಹುದು ಎಂದು ವರ್ಕ್‌ಶಾಪ್ ಮಾಲೀಕರು ಶಂಕಿಸಿದ್ದಾರೆ.
ವರ್ಕ್‌ಶಾಪ್ ಮುಂಭಾಗ ನಿಲ್ಲಿಸಿದ್ದ ಪೈವಳಿಕೆ ನಿವಾಸಿ ಅಬ್ದುಲ್ ರಶೀದ್ ಅವರ ಮಾಲೀಕತ್ವದ ವೋಕ್ಸ್‌ವ್ಯಾಗನ್ ಪೋಲೋ ಕಾರಿಗೆ ದುಷ್ಕರ್ಮಿ ಬೆಂಕಿ ಹಚ್ಚಿರುವುದು ಗಮನಕ್ಕೆ ಬಂದಿದೆ. ಈ ಕೃತ್ಯ ವರ್ಕ್‌ಶಾಪ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆಯ ತನಿಖೆಯ ಭಾಗವಾಗಿ ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವರ್ಕ್‌ಶಾಪ್ ಮಾಲೀಕರೊಂದಿಗೆ ವೈಷಮ್ಯ ಹೊಂದಿರುವ ಯಾರಾದರೂ ದಾಳಿಯ ಹಿಂದೆ ಇರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆಯ ಸಿಐ ಆರ್.ಪಿ. ಅನೂಪ್ ಕೃಷ್ಣ ಹಾಗೂ ಎಸ್‌ಎಚ್‌ಒ ಎಸ್. ಅನೂಪ್ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಕಾರುಗಳನ್ನು ಪರಿಶೀಲಿಸಿದರು. ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಸಿಟಿವಿ ಆಧಾರಿಸಿ ಆರೋಪಿಯನ್ನು ಪತ್ತೆ ಹಚ್ಚುವ ತನಿಖಾ ಕಾರ್ಯ ಮುಂದುವರಿದಿದೆ.

0 Comments