ಮಂಜೇಶ್ವರ: ಮಂಜೇಶ್ವರ ಉಪಜಿಲ್ಲೆಯ 95ನೇ ಶಾಲಾ ಕಲೋತ್ಸವ ನವೆಂಬರ್ 5, 11, 12 ಮತ್ತು 13ರಂದು ಮೀಯಪದವು ಶಾಲೆಯಲ್ಲಿ ನಡೆಯಲಿದೆ. ಎಸ್.ವಿ.ವಿ.ಎಚ್‌ಎಸ್‌ಎಸ್ ಮತ್ತು ವಿಎಯುಪಿಎಸ್ ಮೀಯಪದವು ಶಾಲೆಗಳ ಜಂಟಿ ಆತಿಥ್ಯದಲ್ಲಿ ನಡೆಯುವ ಕಲೋತ್ಸವದಲ್ಲಿ ಉಪಜಿಲ್ಲೆಯ 142 ಶಾಲೆಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 5ರಂದು ವೇದಿಕೆಯೇತರ ಸ್ಪರ್ಧೆಗಳು ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಎಸ್.ವಿ.ವಿ.ಎಚ್‌ಎಸ್‌ಎಸ್ ವ್ಯವಸ್ಥಾಪಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಧ್ವಜಾರೋಹಣ ನೆರವೇರಿಸುವರು. ನವೆಂಬರ್ 11ರಿಂದ 13ರವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 12ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸುವರು. ನಾರಾಯಣ ದೇಲಂಪಾಡಿ, ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಎಂ.ಜಿ. ಬಾಲಸುಬ್ರಹ್ಮಣ್ಯನ್, ಸತೀಶ್‌ಚಂದ್ರ ಹಾಗೂ ಎಸ್‌ಆರ್‌ಸಿಐ ವಿಷ್ಣುಪ್ರಸಾದ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸುವರು.
ನವೆಂಬರ್ 13ರಂದು ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಬಳ್ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಪದಾಧಿಕಾರಿಗಳಾದ ಸಿ.ಎ. ತಾಜುದ್ದೀನ್ ಕಡಂಬಾರ್, ನಾರಾಯಣ ದೇಲಂಪಾಡಿ, ರಮೇಶ್ ಕೆ.ಎನ್., ಮೃದುಲ ಕೆ.ಎಂ., ಅರವಿಂದಾಕ್ಷ ಭಂಡಾರಿ, ಹರೀಶ ಸುಲಾಯ ಒಡ್ಡಂಬೆಟ್ಟು ಮತ್ತು ಶಿವಸುಬ್ರಹ್ಮಣ್ಯ ಪ್ರಸಾದ್ ಟಿ. ಉಪಸ್ಥಿತರಿದ್ದರು.

0 Comments