ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ 150 ಖಾತೆಗಳನ್ನು ಗುರುತಿಸಲಾಗಿದೆ. ಸಂತ್ರಸ್ತೆಯ ಖಾಸಗಿ ಫೋಟೊಗಳನ್ನು ಹಂಚಿಕೊಂಡು ಮಾನಹಾನಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಪ್ರದೀಪ್ ಪೂಜಾರಿ ಮತ್ತು ಸಂತ್ರಸ್ತೆಗೆ ಸಂಬಂಧಿಸಿದ ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ಕಾನೂನುಬಾಹಿರ. ಆತನಿಗೆ ನ್ಯಾಯ ಕೊಡಿಸುವ ಹೆಸರಿನಲ್ಲಿ ಸಂತ್ರಸ್ತೆಗೆ ಅನ್ಯಾಯ ಮಾಡುವುದನ್ನು ಸಹಿಸಲಾಗದು ಎಂದರು.
2020ರಲ್ಲಿ ಯುವತಿಗೆ ಮದುವೆಯಾಗುವಂತೆ ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 2025ರ ನವೆಂಬರ್ 29ರಂದು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಸಂತ್ರಸ್ತೆಯ ಹೇಳಿಕೆ, ವೈದ್ಯಕೀಯ ವರದಿ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
2026ರ ಅಕ್ಟೋಬರ್ 28ರಂದು ಪ್ರದೀಪ್ ಮತ್ತೆ ಯುವತಿಯ ಮನೆಗೆ ತೆರಳಿ ಖಾರದ ಪುಡಿ ಎರಚಿ ಕೊಲೆಗೆ ಯತ್ನಿಸಿದ್ದಾನೆ. ಈ ವೇಳೆ ಆಕೆಯ ತಾಯಿಯ ಮೇಲೆಯೂ ಖಾರದ ಪುಡಿ ಎರಚಿದ್ದಾನೆ. ಪ್ರದೀಪ್ನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳ ಆರೋಪಕ್ಕೆ ತನಿಖೆಯಲ್ಲಿ ಯಾವುದೇ ಆಧಾರ ಸಿಕ್ಕಿಲ್ಲ. ಆತ ಯುವತಿಯ ಮನೆಗೆ ಬಂದಿರುವುದಕ್ಕೆ ಸಾಕ್ಷ್ಯಗಳಿದ್ದು, ಆತ ತಂದಿದ್ದ ಬಟ್ಟೆ ಮತ್ತು ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರದೀಪ್ ನೀಡಿದ್ದ ದೂರಿನ ಮೇರೆಗೆ ನೇರವಾಗಿ ಎಫ್ಐಆರ್ ದಾಖಲಿಸದೆ ಕರ್ತವ್ಯ ಲೋಪ ಎಸಗಿದ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಪಶ್ಚಿಮ ವಲಯ ಐಜಿಪಿ ಅವರಲ್ಲಿ ವರದಿ ಮಾಡುವಂತೆ ಸೂಚಿಸಲಾಗಿದೆ. ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಪ್ರದೀಪ್ ಮೇಲೆ ಹಲ್ಲೆ ನಡೆಸಿದ ಹಾಗೂ ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಪತ್ತೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ತಪ್ಪಿತಸ್ಥರನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 3ರಿಂದ ನವೆಂಬರ್ 7ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ನವೆಂಬರ್ 3ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 7ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಹೊರತುಪಡಿಸಿ ಯಾವುದೇ ಧರಣಿ, ಪ್ರತಿಭಟನೆ, ಮೆರವಣಿಗೆ ಅಥವಾ ಅನಿರ್ದಿಷ್ಟಾವಧಿ ಮುಷ್ಕರಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ನಿಷೇಧಾಜ್ಞೆಯ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

0 Comments