ಉಪ್ಪಿನಂಗಡಿ: ಸುಲಿಗೆ ಪ್ರಕರಣವೊಂದರಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ನಿವಾಸಿ ಮಸೂದ್ ಮಸೂರ ಬಂಧಿತ ಆರೋಪಿ.
2006ರ ಜುಲೈ 26ರಂದು ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಶಿವಶಂಕರ್ ಶಾಸ್ತ್ರಿ ಅವರ ಮನೆಗೆ ನಾಲ್ವರು ಅಪರಿಚಿತರು ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದಿದ್ದರು. ಬಳಿಕ ಶಿವಶಂಕರ್ ಶಾಸ್ತ್ರಿ ಹಾಗೂ ಅವರ ಪತ್ನಿಯನ್ನು ಕಟ್ಟಿಹಾಕಿ ಚಿನ್ನಾಭರಣ ಮತ್ತು ನಗದು ಸೇರಿದಂತೆ ಒಟ್ಟು 2,35,800 ರೂ. ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿದ್ದರು.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 187/2006ರ ಅಡಿಯಲ್ಲಿ ಐಪಿಸಿ ಕಲಂ 395 ಮತ್ತು 397ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ ಮಸೂದ್ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಹೆಚ್.ಸಿ. 325 ನಂಜುಂಡಯ್ಯ ಮತ್ತು ಪಿ.ಸಿ. 1944 ಮ್ಯಾಥ್ಯು ವರ್ಗಿಸ್ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

0 Comments