Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಏಳು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾದ ಮಹಿಳೆ: ನಿರಪರಾಧಿ ಯುವಕ 30 ತಿಂಗಳು ಜೈಲಿನಲ್ಲಿ!

ಮಂಡ್ಯ: ಕೊಲೆಗೀಡಾಗಿದ್ದಾಳೆ ಎಂದು ಭಾವಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಮಹಿಳೆಯೊಬ್ಬರು ಏಳು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸಿದ್ದ ಅಮಾಯಕ ಯುವಕನೊಬ್ಬ ಮಾಡದ ತಪ್ಪಿಗೆ  30 ತಿಂಗಳು ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

2019ರ ಜೂನ್‌ನಲ್ಲಿ ಪಾಂಡವಪುರ ಪಟ್ಟಣದಿಂದ ನಾಪತ್ತೆಯಾಗಿದ್ದ ಮಂಜು ಎನ್. (35) ಎಂಬ ಮಹಿಳೆ ಬುಧವಾರ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಮೂಲದ ನಾಗೇಂದ್ರ ಎಂಬವರನ್ನು ವಿವಾಹವಾಗಿರುವ ಮಂಜು, ಅವರೊಂದಿಗೆ ಜೀವನ ನಡೆಸುತ್ತಿದ್ದರು. ಈ ಬೆಳವಣಿಗೆಯಿಂದಾಗಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ ಎಂ.ಆರ್. ಅಲಿಯಾಸ್ ಕಾಳ (36) ಅವರಿಗೆ ಸಮಾಧಾನದ ಉಸಿರು ಬಿಡುವಂತಾಗಿದೆ.

ಮಂಜು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ತಂದೆ ನಾಗರಾಜು 2019ರ ಜೂನ್‌ನಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಮಾರು ಎರಡು ವರ್ಷಗಳ ಬಳಿಕ ರಾಜೇಶ್ ಎಂಬವರು ಮಂಜು ಅವರನ್ನು ಕೊಲೆ ಮಾಡಿ ಶವವನ್ನು ಕಾವೇರಿ ನದಿಗೆ ಎಸೆದಿದ್ದಾರೆ ಎಂದು ಆರೋಪಿಸಿ ನಾಗರಾಜು ಮತ್ತೊಂದು ದೂರು ನೀಡಿದ್ದರು.

ಮಂಜು ನಾಪತ್ತೆಯಾದ ದಿನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಅಪರಿಚಿತರಾಗಿದ್ದ ರಾಜೇಶ್ ಅವರ ಮೊಬೈಲ್ ಫೋನ್ ಪಡೆದು ಕೊನೆಯ ಕರೆ ಮಾಡಿದ್ದರು. ಈ ಮೊಬೈಲ್ ಕರೆಗಳ ದಾಖಲೆ ಆಧರಿಸಿ 2021ರಲ್ಲಿ ಪೊಲೀಸರು ರಾಜೇಶ್ ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದರು. ಸುಮಾರು 30 ತಿಂಗಳು ಜೈಲಿನಲ್ಲಿದ್ದ ಅವರು 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇತ್ತೀಚೆಗೆ ರಾಜೇಶ್ ಪರ ವಕೀಲ ನಟೇಶ್ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ, ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಮಂಜು ಜೀವಂತವಾಗಿರುವುದು ಪತ್ತೆಯಾಗಿದೆ.

ತನ್ನ ಇಚ್ಛೆಗೆ ವಿರುದ್ಧವಾಗಿ ಕುಟುಂಬದವರು ಮದುವೆ ಮಾಡಲು ಮುಂದಾಗಿದ್ದರಿಂದ ಮನೆ ಬಿಟ್ಟು ಹೋಗಿದ್ದೆ. ಬಳಿಕ ನಾಗೇಂದ್ರ ಅವರನ್ನು ವಿವಾಹವಾಗಿ ಸುಮಾರು ಒಂದು ವರ್ಷ ತಮಿಳುನಾಡಿನಲ್ಲಿ ವಾಸವಿದ್ದೆವು. ಇತ್ತೀಚೆಗೆ ಮಾಯಿಗೋನಹಳ್ಳಿಗೆ ಬಂದು ನೆಲೆಸಿದ್ದೇವೆ ಎಂದು ಮಂಜು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಾಜೇಶ್ ಎಂಬವರ ಪರಿಚಯವೇ ತನಗಿಲ್ಲ ಎಂದು ಹೇಳಿರುವ ಅವರು, ಪ್ರಕರಣದ ಸತ್ಯಾಸತ್ಯತೆ ತಿಳಿಸಲು ಯಾವುದೇ ಪ್ರಾಧಿಕಾರದ ಮುಂದೆ ಹೇಳಿಕೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಮಂಜು ಜೀವಂತವಾಗಿ ಪತ್ತೆಯಾದ ಬೆನ್ನಲ್ಲೇ, ಅಂದಿನ ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ವಿರುದ್ಧ ರಾಜೇಶ್ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ತಪ್ಪೊಪ್ಪಿಗೆ ಪಡೆಯಲು ಪೊಲೀಸರು ಹಲ್ಲೆ ನಡೆಸಿದ್ದಲ್ಲದೆ, ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿದ್ದರು ಎಂದು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.

ಇದೇ ವೇಳೆ, ಮಗನಿಗೆ ರಕ್ಷಣೆ ಹಾಗೂ ನ್ಯಾಯ ಒದಗಿಸುವಂತೆ ಕೋರಿ ರಾಜೇಶ್ ಅವರ ತಂದೆ ರಮೇಶ್ ಬುಧವಾರ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಸದ್ಯ ಮಂಜು ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

ಹಿಂದಿನ ಕೊಲೆ ತನಿಖೆಯಲ್ಲಿ ನಡೆದಿರುವ ಲೋಪಗಳ ಕುರಿತು ಸಮಗ್ರ ವಿಚಾರಣೆ ನಡೆಸಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ. ಶೋಭಾರಾಣಿ ಆದೇಶಿಸಿದ್ದಾರೆ. ಶ್ರೀರಂಗಪಟ್ಟಣ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

Post a Comment

0 Comments

ಜಾಹೀರಾತು

Responsive Advertisement