ಬದಿಯಡ್ಕ: ನಗರದ ಆಕರ್ಷಣೆ, ಕಾರ್ಪೊರೇಟ್ ಉದ್ಯೋಗಗಳ ಬೆನ್ನತ್ತುವ ಇಂದಿನ ಯುವಜನತೆಯ ನಡುವೆ, ಹುಟ್ಟೂರಿನ ಮಣ್ಣಿನಲ್ಲೇ ನೆಲೆನಿಂತು ಕೃಷಿಯ ಮೂಲಕ ಸಾಧನೆಯ ಹಾದಿ ತುಳಿಯುತ್ತಿರುವ ಅಪರೂಪದ ಯುವಕ ನೀರ್ಚಾಲು ಸಮೀಪದ ಮಿಂಚಿನಡ್ಕ ಅಣೆಬೈಲಿನ ಪ್ರದೀಪ್.
ಕೃಷಿ ಪರಂಪರೆಯ ಕುಟುಂಬದಲ್ಲಿ ಬೆಳೆದ ಅಣೆಬೈಲು ಸುಬ್ರಹ್ಮಣ್ಯ ಭಟ್ ಮತ್ತು ಮಮತಾ ದಂಪತಿಯ ಪುತ್ರ ಪ್ರದೀಪ್, ಕೃಷಿಯನ್ನು ಕೇವಲ ಉಪಜೀವನದ ಮಾರ್ಗವಾಗಿ ನೋಡದೆ, ಅದನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಪ್ರಸ್ತುತ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಉದ್ಯೋಗದ ಜವಾಬ್ದಾರಿಯ ನಡುವೆಯೂ ಕೃಷಿಯ ಮೇಲಿನ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ.
ಕೆಲಸದಾಳುಗಳ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಹವಾಮಾನ ವೈಪರೀತ್ಯಗಳಿಂದಾಗಿ ಭತ್ತದ ಬೇಸಾಯದಿಂದ ಹಿಂದೆ ಸರಿಯುತ್ತಿರುವವರ ನಡುವೆ, ಪ್ರದೀಪ್ ತಮ್ಮ ಪಾರಂಪರಿಕ ಕೃಷಿಭೂಮಿಯ ಸುಮಾರು 2.5 ಎಕರೆ ಗದ್ದೆಯಲ್ಲಿ ಯಂತ್ರಗಳ ನೆರವಿನಿಂದ ಭತ್ತ ಬೆಳೆದು ಗಮನ ಸೆಳೆದಿದ್ದಾರೆ. ಉಳುಮೆಯಿಂದ ಹಿಡಿದು ನಾಟಿ, ನೀರಿನ ನಿರ್ವಹಣೆ, ಕಳೆ ತೆಗೆಯುವುದು ಹಾಗೂ ಕೊಯ್ಲಿನವರೆಗಿನ ಕೃಷಿ ಚಟುವಟಿಕೆಗಳಲ್ಲಿ ಸ್ವತಃ ತೊಡಗಿಸಿಕೊಂಡು ಶ್ರಮದ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ.
ಭತ್ತದ ಕೃಷಿಯೊಂದಿಗೆ ಅಳಸಂಡೆ, ಬೆಂಡೆ, ತೊಂಡೆಕಾಯಿ, ಕುಂಬಳಕಾಯಿ, ಸೋರೇಕಾಯಿ ಮೊದಲಾದ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಅಡಿಕೆ, ತೆಂಗು, ಕಾಳುಮೆಣಸು ಹಾಗೂ ರಬ್ಬರ್ ಕೃಷಿಯಲ್ಲೂ ಕುಟುಂಬದೊಂದಿಗೆ ಕೈಜೋಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಜೇನುಕೃಷಿಯಲ್ಲೂ ಆಸಕ್ತಿ ಹೊಂದಿರುವ ಪ್ರದೀಪ್, ಜೇನುಪೆಟ್ಟಿಗೆಗಳನ್ನು ಅಳವಡಿಸಿ ನೈಸರ್ಗಿಕ ಜೇನುತುಪ್ಪ ಉತ್ಪಾದನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಜೇನುನೊಣಗಳು ಪರಾಗಸ್ಪರ್ಶಕ್ಕೆ ನೆರವಾಗುವ ಮೂಲಕ ಕೃಷಿಗೂ ಪೂರಕವಾಗಿವೆ.
ತಂದೆ ಸುಬ್ರಹ್ಮಣ್ಯ ಭಟ್ ಕೃಷಿಯೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು, ಸಹೋದರ ಪ್ರಶಾಂತ್ ಕೂಡ ಕೃಷಿ ಚಟುವಟಿಕೆಗಳಲ್ಲಿ ಸಹಕರಿಸುತ್ತಾರೆ. ಕುಟುಂಬದ ಬೆಂಬಲ ಪ್ರದೀಪ್ ಅವರ ಕೃಷಿ ಪಯಣಕ್ಕೆ ಮತ್ತಷ್ಟು ಬಲ ನೀಡಿದೆ.
ಕೃಷಿ ಎಂದರೆ ನಷ್ಟ, ಕೃಷಿಯಲ್ಲಿ ಭವಿಷ್ಯವಿಲ್ಲ ಎಂಬ ಭಾವನೆಗಳ ನಡುವೆ, ಆಸಕ್ತಿ, ಪರಿಶ್ರಮ ಮತ್ತು ಸ್ವಾವಲಂಬನೆಯಿಂದ ಕೃಷಿಯನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಪ್ರದೀಪ್ ಅವರ ಬದುಕು ಉತ್ತಮ ಉದಾಹರಣೆ. ಉದ್ಯೋಗದ ಜೊತೆಗೆ ಕೃಷಿಯನ್ನೂ ಬೆಳೆಸಿಕೊಂಡು, ಪಾರಂಪರಿಕ ಕೃಷಿಭೂಮಿಯನ್ನು ಜೀವಂತವಾಗಿರಿಸುವ ಅವರ ಪ್ರಯತ್ನ ಯುವಜನತೆಗೆ ಸ್ಫೂರ್ತಿಯಾಗಿದೆ.
ಮಣ್ಣನ್ನು ಪ್ರೀತಿಸುವ ಕೈಗಳಿಗೆ ಸೋಲಿಲ್ಲ; ಶ್ರಮವನ್ನು ನಂಬುವ ಬದುಕಿಗೆ ಬರವಿಲ್ಲ ಎಂಬ ಸಂದೇಶ ಸಾರುವ ಪ್ರದೀಪ್, ಕೃಷಿಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುವ ಯುವಕರಿಗೆ ನಿಜಕ್ಕೂ ಮಾದರಿಯಾಗಿದ್ದಾರೆ.

0 Comments