ಕುಂಬಳೆ : ರಾಷ್ಟ್ರೀಯ ಹೆದ್ದಾರಿ 66ರ ಶಿರಿಯ ಸೇತುವೆ ಸಮೀಪ ಹೆದ್ದಾರಿ ಪೊಲೀಸ್ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದೆ.
ತಲಪಾಡಿಯಿಂದ ಕಾಸರಗೋಡು ಕಡೆಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಕ್ಕೆ ಮುಂಜಾನೆ ಸುಮಾರು 1.30ರಿಂದ 2 ಗಂಟೆಯ ನಡುವೆ ಅತಿವೇಗವಾಗಿ ಬಂದ AP 09 CE 1809 ನೋಂದಣಿ ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದ್ದು, ಪೊಲೀಸ್ ವಾಹನದಲ್ಲಿದ್ದವರು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಮಂಗಳೂರಿನ ವಿನೋದ್ ರಾಜ್ (36) ಕಾರು ಚಲಾಯಿಸುತಿದ್ದು, ಅಪಘಾತದಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ, ಘಟನೆ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

0 Comments