Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಂಭ್ರಮ; ಕಲಾ ಪ್ರೇಮಿಗಳ ಗಮನ ಸೆಳೆಯುತ್ತಿರುವ ಯುವ ಪ್ರತಿಭೆಗಳು

ಬದಿಯಡ್ಕ: ಸ್ಥಳೀಯ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅತ್ಯಂತ ಸೌಹಾರ್ದಯುತ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನಡೆಯುತ್ತಿರುವ 65ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಸಾರ್ವಜನಿಕರ ಹಾಗೂ ಕಲಾಪ್ರೇಮಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಉಪಜಿಲ್ಲೆಯ ವ್ಯಾಪ್ತಿಯ 94 ಶಾಲೆಗಳಿಂದ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ಸಜ್ಜುಗೊಳಿಸಲಾದ 13 ವಿಭಿನ್ನ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡುತ್ತಿದ್ದು, ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಕಲೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರ ಕಿರಿಕಿರಿ ಉಂಟಾಗದಂತೆ ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಸಜ್ಜಿತ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ವಯಂಸೇವಕರು ಹಾಗೂ ಸಂಘಟನಾ ಸಮಿತಿಯ ಸಕ್ರಿಯ ಸೇವೆಯಿಂದಾಗಿ ವಾಹನ ದಟ್ಟಣೆ ರಹಿತವಾಗಿ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರುತ್ತಿವೆ.

ಆಗಾಗ ಕಾಣಿಸಿಕೊಳ್ಳುತ್ತಿರುವ ತುಂತುರು ಮಳೆಯು ಕಲಾಪ್ರೇಮಿಗಳ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ. ಮಳೆಯ ಅಹಿತಕರ ವಾತಾವರಣದ ನಡುವೆಯೂ ವೇದಿಕೆಗಳಲ್ಲಿ ವಿದ್ಯಾರ್ಥಿಗಳ ಕಲಾಪ್ರದರ್ಶನ ಕಳೆಗಟ್ಟಿದ್ದು, ವೀಕ್ಷಕರು ಕರತಾಡನದ ಮೂಲಕ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಆಗಮಿಸಿದ ಸರ್ವ ಸ್ಪರ್ಧಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗಾಗಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಶುಚಿ-ರುಚಿಯಾದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಆಹಾರ ಸಮಿತಿಯ ನೇತೃತ್ವದಲ್ಲಿ ಹಸಿರು ನಿಯಮಾವಳಿ ಯನ್ನು ಪಾಲಿಸಿಕೊಂಡು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಊಟದ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ.

ಸಾಂಸ್ಕೃತಿಕ ವೈವಿಧ್ಯತೆಯಿಂದ ಕಂಗೊಳಿಸುತ್ತಿರುವ ಈ ಕಲೋತ್ಸವವು ಮುಂದಿನ ದಿನಗಳಲ್ಲೂ ವೈಭವದಿಂದ ಮುಂದುವರಿಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement