ಕಾಸರಗೋಡು: ರಜಾ ದಿನಗಳಲ್ಲಿ ಸಮುದ್ರ ವೀಕ್ಷಣೆ ಹಾಗೂ ತಂಪಾದ ಗಾಳಿಯ ಸವಿಯನ್ನು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಭೇಟಿ ನೀಡುವ ನೆಲ್ಲಿಕುಂಜೆ ಬೀಚ್ನ ವಿಶ್ರಾಂತಿ ಸ್ಥಳದಿಂದ ಸಮುದ್ರಕ್ಕೆ ಇಳಿಯುವ ಮೆಟ್ಟಿಲುಗಳು ಹಾಗೂ ತಡೆಗೋಡೆಗಳು ಹಾನಿಗೊಳಗಾಗಿ ಒಂದು ವರ್ಷ ಕಳೆದರೂ ದುರಸ್ತಿಯಾಗಿಲ್ಲ.
ಬೀಚ್ನ ಪ್ರಮುಖ ಭಾಗದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸುತ್ತುಗೋಡೆ, ಕುಳಿತುಕೊಳ್ಳಲು ಸಿಮೆಂಟ್ ಆಸನಗಳು, ವಿದ್ಯುತ್ ದೀಪಗಳು ಹಾಗೂ ಸಣ್ಣ ಗಿಡಗಳನ್ನು ನೆಟ್ಟು ನಗರಸಭೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೌಕರ್ಯಗಳನ್ನು ನಿರ್ಮಿಸಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಭಾರೀ ಸಮುದ್ರದ ಅಲೆಗಳ ಅಬ್ಬರಕ್ಕೆ ಮೆಟ್ಟಿಲುಗಳು ಮತ್ತು ತಡೆಗೋಡೆಯ ಕೆಲವು ಭಾಗಗಳು ಕುಸಿದಿದ್ದವು.
ಸುತ್ತುಗೋಡೆಗೆ ಅಳವಡಿಸಿದ್ದ ಗೇಟನ್ನೂ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಇದೀಗ ಆಸನಗಳು, ಗಿಡಗಳು ಸೇರಿದಂತೆ ಹಲವು ಸೌಲಭ್ಯಗಳು ನಾಶವಾಗುತ್ತಿವೆ. ಬೀಚ್ಗೆ ಪ್ರತಿದಿನ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದ್ದರೂ ಅಗತ್ಯ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಬೀಚ್ನಲ್ಲಿ ಚಹಾ, ತಿಂಡಿ ಹಾಗೂ ಐಸ್ಕ್ರೀಂ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಬೀಚ್ನ್ನು ಮತ್ತಷ್ಟು ಸುಂದರಗೊಳಿಸಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ನಗರಸಭೆ ನಿರ್ಧರಿಸಿದ್ದರೂ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾನಿಗೊಳಗಾದ ಮೆಟ್ಟಿಲು ಮತ್ತು ತಡೆಗೋಡೆಗಳನ್ನು ದುರಸ್ತಿಗೊಳಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

0 Comments