ಚೆನ್ನೈ: ಮಲಯಾಳಂ ಚಿತ್ರರಂಗದ ಹಿರಿಯ ಮೇಕಪ್ ಕಲಾವಿದ ಪಾಂಡಿಯನ್ (74) ನಿಧನರಾಗಿದ್ದಾರೆ. ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.
ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸುಮಾರು 500 ಚಿತ್ರಗಳಿಗೆ ಮೇಕಪ್ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಪಾಂಡಿಯನ್, ದಕ್ಷಿಣ ಭಾರತದ ಹಲವು ತಲೆಮಾರಿನ ಖ್ಯಾತ ನಟರಿಗೆ ಪಾತ್ರಕ್ಕೆ ತಕ್ಕ ವೇಷಭೂಷಣ ಹಾಗೂ ಮೇಕಪ್ ಸಿದ್ಧಪಡಿಸಿದ್ದರು.
ಪ್ರೇಮ್ ನಜೀರ್, ಎನ್.ಟಿ. ರಾಮರಾವ್, ಎಸ್.ವಿ. ರಂಗರಾವ್, ಕೃಷ್ಣ, ರಜನಿಕಾಂತ್, ಕಮಲ್ ಹಾಸನ್, ಮಮ್ಮುಟ್ಟಿ, ಮೋಹನ್ ಲಾಲ್ ಹಾಗೂ ಫಹದ್ ಫಾಸಿಲ್ ಸೇರಿದಂತೆ ಅನೇಕ ನಟರೊಂದಿಗೆ ಅವರು ಕೆಲಸ ಮಾಡಿದ್ದರು. 2001ರಲ್ಲಿ 'ಮಧುರ ನೊಂಬರಕಟ್ಟು' ಚಿತ್ರದ ಮೇಕಪ್ಗಾಗಿ ಕೇರಳ ರಾಜ್ಯದ ಅತ್ಯುತ್ತಮ ಮೇಕಪ್ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದರು.
ತಮಿಳುನಾಡು ಮೂಲದ ಪಾಂಡಿಯನ್ 1968ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ನಟ ಸತ್ಯನ್ ಅವರ ಮೇಕಪ್ ಕಲಾವಿದ ಕೃಷ್ಣರಾಜ್ ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಲವು ಹಿರಿಯ ಮೇಕಪ್ ಕಲಾವಿದರೊಂದಿಗೆ ಕೆಲಸ ಮಾಡಿ ಅನುಭವ ಗಳಿಸಿದ್ದರು. 1972ರಲ್ಲಿ ಜೆ. ವಿಲಿಯಮ್ಸ್ ನಿರ್ದೇಶನದ 'ಮದಾಲಸಾ' ಚಿತ್ರದ ಮೂಲಕ ಸ್ವತಂತ್ರ ಮೇಕಪ್ ಕಲಾವಿದರಾದರು.
ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ಮೊದಲ ಚಿತ್ರ 'ಕುರುಕ್ಕಂಟೆ ಕಲ್ಯಾಣಂ'ನಿಂದ ಆರಂಭಿಸಿ ಹಲವು ಚಿತ್ರಗಳಲ್ಲಿ ಮೇಕಪ್ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯನ್ ಅಂತಿಕಾಡ್ ಮತ್ತು ಮೋಹನ್ ಲಾಲ್ ಜೋಡಿಯ ಕೊನೆಯ ಚಿತ್ರವೆಂದು ಉಲ್ಲೇಖಿಸಲಾದ 'ಹೃದಯಪುರಂ' ಅವರ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ.
ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿದ್ದ ಪಾಂಡಿಯನ್ ಅವರಿಗಾಗಿ ಸತ್ಯನ್ ಅಂತಿಕಾಡ್ 'ಮನಸಿನಕ್ಕರೆ' ಚಿತ್ರದ ಚಿತ್ರೀಕರಣವನ್ನೇ ಮುಂದೂಡಿದ್ದ ಘಟನೆ ಅಂದು ಸುದ್ದಿಯಾಗಿತ್ತು. ಮೃತರು ಪತ್ನಿ ಲಕ್ಷ್ಮಿ ಹಾಗೂ ಮಕ್ಕಳಾದ ಅನಿತಾ ಮತ್ತು ತನ್ನುಯಾ ಅವರನ್ನು ಅಗಲಿದ್ದಾರೆ.

0 Comments