Ticker

6/recent/ticker-posts

ಸಂಪ್ರದಾಯಗಳನ್ನು ಸಂಕೇತಿಸುವ ತುಳುವರ "ಆಟಿ"


 ಒಂದು ಜನಾಂಗದ ಆಚಾರ ವಿಚಾರಗಳು ಅವರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ತುಳುನಾಡಿನ ಭವ್ಯವಾದ ಸಂಸ್ಕೃತಿ ತುಳುವರ ಆಚರಣೆಗಳಲ್ಲಿ ವ್ಯಕ್ತವಾಗುತ್ತದೆ.

ವರ್ಷಪೂರ್ತಿ ಹತ್ತು ಹಲವು ಹಬ್ಬಗಳನ್ನು ಆಚರಿಸುವ ತುಳುವರಿಗೆ 'ಆಟಿ' ಅತ್ಯಂತ ಮಹತ್ವದ ತಿಂಗಳು.

ದೈವ-ಭೂತಾದಿಗಳ ಆರಾಧಕರಾದ ತುಳುವರು ಈ ತಿಂಗಳಲ್ಲಿ ದೈವಗಳು ಘಟ್ಟ ಹತ್ತುತ್ತವೆ ಎಂದು ನಂಬುತ್ತಾರೆ. ಹಾಗಾಗಿ 'ಆಷಾಢ' ಅಥವಾ 'ಆಟಿ' ತಿಂಗಳಿನಲ್ಲಿ ದೈವಗಳ ಕಾರಣಿಕ ಕಡಿಮೆ ಎಂಬುದಾಗಿ ಭಾವಿಸುತ್ತಾರಲ್ಲದೆ, ಯಾವುದೇ ಶುಭಕಾರ್ಯಗಳನ್ನೂ ನಡೆಸುವುದಿಲ್ಲ. ಅದೇ ರೀತಿ ಈ ಆಷಾಢ ಮಾಸದಲ್ಲಿ ಜಾತ್ರೆ, ಕೋಲಗಳು ಇರುವುದಿಲ್ಲ. ಹೆಚ್ಚಾಗಿ ಕೃಷಿಯನ್ನೇ ಆಶ್ರಯಿಸಿದವರಿಗೆ ಆಷಾಢದಲ್ಲಿ ಬಿತ್ತನೆ ಕೆಲಸಗಳೆಲ್ಲಾ ಮುಗಿದು ಬಿಡುವಿನ ಸಮಯ. ಬೇರೆ ಆದಾಯ ಮೂಲಗಳೊಂದೂ ಇಲ್ಲದೆ ಅದು ಕಷ್ಟದ ತಿಂಗಳು. ಒಂದೆಡೆ ಒಂದೇ ಸವನೆ ಸುರಿವ ಮಳೆ! ಇನ್ನೊಂದೆಡೆ ಸಂಗ್ರಹಿಸಿಟ್ಟ ಧವಸ-ಧಾನ್ಯಗಳೆಲ್ಲ ಖಾಲಿಯಾಗಿ ಮುಂದೇನು ಎಂಬ ಭಯ!


ಈಗ ತುಳುವರು ಸಹಜವಾಗಿಯೇ ಪ್ರಕೃತಿಯ ಮೊರೆಹೋಗಿ ಸಸ್ಯಗಳ ಚಿಗುರು, ಗೆಡ್ಡೆ-ಗೆಣಸು, ಸೊಪ್ಪುಗಳನ್ನು ತಂದು ವಿಧವಿಧ ಖಾದ್ಯಗಳನ್ನು ತಯಾರಿಸತೊಡಗಿದರು. ಹಪ್ಪಳ, ಮಾಂಬಳ, ಸಾಂತನಿ, ಸುಟ್ಟ ಹುಣಸೆ ಬೀಜಗಳ ಸವಿ ಒಂದೆಡೆಯಾದರೆ,  ಅರಸಿನ ಎಲೆ ಕಡುಬು, ಹಲಸಿನ ಹಣ್ಣಿನ ಗಟ್ಟಿ, ತಗತೆ ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯ, ನುಗ್ಗೆ ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯ, ಕೆಸುವಿನ ಪತ್ರೊಡೆ, ಉಪ್ಪಡಚ್ಚಿಲ್, ಉಪ್ಪಿನಲ್ಲಿ ಹಾಕಿಟ್ಟ ಮಾವಿನ ಗೊಜ್ಜು,  ಕಣಿಲೆಯ ವಿವಿಧ ಖಾದ್ಯಗಳು ಇನ್ನೊಂದೆಡೆ ಬಾಯಲ್ಲಿ ನೀರೂರಿಸುತ್ತವೆ. ಇವೆಲ್ಲವನ್ನೂ ಹೆಚ್ಚಾಗಿ ಆಟಿಯಲ್ಲಿ ಮಾತ್ರ ಕಾಣಬಹುದು. ಇವುಗಳಲ್ಲಿ ಔಷಧೀಯ ಗುಣಗಳೂ ಇರುತ್ತವೆ ಎಂಬುದು ತುಳುವರ ವಿಶ್ವಾಸ! ಧಾರಾಕಾರ ಸುರಿವ ಮಳೆಯಿಂದಾಗಿ ಕಾಡುವ ರೋಗಗಳಿಗೆ ಇಂತಹ ಆಹಾರಗಳು ಹಿತಕರ ಎಂಬ ಹಿರಿಯರ ತಿಳುವಳಿಕೆಯನ್ನು ಇಲ್ಲಿ ಗಮನಿಸಬಹುದು.

  ಆಟಿ ತಿಂಗಳ *'ಅಗೆಲ್'* ತುಳುವರ ಒಂದು ವಿಶಿಷ್ಟ ಸಂಪ್ರದಾಯ. ಇದು 'ಕುಲೆಕುಲೆ'ಗ್ ಅರ್ಥಾತ್ ಸತ್ತವರಿಗೆ ಬಡಿಸುವ ಒಂದು ಕ್ರಮ. ಹದಿನಾರು ಬಾಳೆಎಲೆಗಳನ್ನು ಹಾಕಿ ಅದರಲ್ಲಿ ಕೋಳಿ ಪದಾರ್ಥ, ಮೀನು ಪದಾರ್ಥ, ಅನ್ನ ಎಲ್ಲವನ್ನೂ ಬಡಿಸಿ ಕುಟುಂಬದವರೆಲ್ಲರೂ ಸೇರಿ ಗತಿಸಿದ ಹಿರಿಯರನ್ನು ಪ್ರಾರ್ಥಿಸುವರು. ಒಂದು ಪ್ರತ್ಯೇಕ ಎಲೆಯಲ್ಲಿ ಸಸ್ಯಾಹಾರವನ್ನು ಮಾತ್ರ ಬಡಿಸುವುದಿದೆ. ಅದನ್ನು 'ಜೈನ'ನಿಗೆ ಬಡಿಸುವುದು ಎನ್ನುತ್ತಾರೆ.
'ಆಟಿ ಕುಲ್ಲುನಿ' ಅಥವಾ 'ಆಟಿ ತಮ್ಮನ' ಇನ್ನೊಂದು ಬಹುಮುಖ್ಯ ಆಚರಣೆ. ಹೊಸದಾಗಿ ಮದುವೆಯಾದ ಮಗಳನ್ನು ತವರಿಗೆ ಕರೆದುಕೊಂಡು ಬರುತ್ತಾರೆ. ಹಾಗಾಗಿ ನವಜೋಡಿಗಳಿಗೆ ಇದು ವಿರಹದ ತಿಂಗಳು. ಅತಿ ಕಷ್ಟದ ಆಟಿ ತಿಂಗಳಿನಲ್ಲಿ ಅತ್ತೆ ಮನೆಯಲ್ಲಿ ತಮ್ಮ ಮಗಳೆಲ್ಲಿ ಆಹಾರವಿಲ್ಲದೆ ಸೊರಗುವಳೋ ಎಂಬ ಹೆತ್ತವರ ಕಾಳಜಿ ಇಲ್ಲಿ ವ್ಯಕ್ತವಾಗುತ್ತದೆ. ಈ ತಿಂಗಳಿನಲ್ಲಿ ಗರ್ಭಿಣಿಯಾದರೆ 'ಸುಗ್ಗಿ' ತಿಂಗಳಿನಲ್ಲಿ ಹೆರಿಗೆಯಾಗುತ್ತದೆ. ಅದು ತುಂಬಾ ಸೆಕೆಯ ಕಾಲ ಹಾಗೂ ಬಿಡುವಿಲ್ಲದ ಕೃಷಿ ಕೆಲಸದ ಒತ್ತಡದಿಂದಾಗಿ ಮಗುವಿನ ಆರೈಕೆಗೆ ತೊಂದರೆಯಾಗಬಹುದು ಎಂಬ ದೂರಾಲೋಚನೆಯಿಂದ ಕೂಡಾ ಈ ಆಚರಣೆ ಬೆಳೆದು ಬಂದಿರಬಹುದು.

'ಆಟಿ ಅಮಾವಾಸ್ಯೆ' 
ತುಳುವರ ಪ್ರಮುಖವಾದೊಂದು ಆಚರಣೆ. ಆಟಿ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯಂದು ಮನೆಯ ಯಜಮಾನ ಬೆಳಕು ಹರಿಯುವ ಮೊದಲೇ ಹಾಲೆ ಮರದ ತೊಗಟೆಯನ್ನು (ಸಪ್ತಪರ್ಣಿ) ತರುತ್ತಾನೆ. ಅದಕ್ಕೆ ಬೆಳ್ಳುಳ್ಳಿ, ಶುಂಠಿ ಮೊದಲಾದವನ್ನು ಸೇರಿಸಿ ಕಷಾಯ ತಯಾರಿಸಿ ಮನೆಯವರೆಲ್ಲರೂ ಕುಡಿಯುವ ರೂಢಿಯಿದೆ. ಈ ತೊಗಟೆಯನ್ನು ಬೆತ್ತಲೆಯಾಗಿ ಹೋಗಿ ತರಬೇಕು, ಕಬ್ಬಿಣದ ವಸ್ತುಗಳನ್ನು ತಾಗಿಸದೆ ಕಲ್ಲಿನಿಂದಲೇ ಜಜ್ಜಿ ತರಬೇಕು ಎಂಬ ವಿಶ್ವಾಸವಿದೆ. ಆಟಿ ಅಮಾವಾಸ್ಯೆಯ ದಿನ ಈ ಮರದಲ್ಲಿ  ಔಷಧೀಯ ಗುಣಗಳು ತುಂಬಿರುತ್ತವೆ ಎಂಬುದು ನಂಬಿಕೆ. ಕಷಾಯ ಕುಡಿದ ಬಳಿಕ ಮೆಂತ್ಯೆಗಂಜಿ ಸೇವಿಸುವ ಪರಿಪಾಠವಿದೆ.

ಇನ್ನು ಆಟಿಕಳಂಜ ದೈವಗಳು ಊರಿನಲ್ಲಿ ಇಲ್ಲದ ಸಮಯದಲ್ಲಿ ಊರಿನ ಮಾರಿ ಓಡಿಸಿ ಜನರನ್ನು ರಕ್ಷಿಸುವ ಮಾಂತ್ರಿಕ!  ನಲಿಕೆ ಸಮುದಾಯದ ಜನರು ಮನೆ ಮನೆಗೆ ಬಂದು ಆಟಿಕಳಂಜನನ್ನು ಕುಣಿಸುತ್ತಾರೆ. ಮಾರಿ ಕಳೆದು ರೋಗ-ರುಜಿನಗಳಿಂದ ಕಾಪಾಡುವ ಕಳಂಜನಿಗೆ ಹಣ, ಧವಸಧಾನ್ಯ, ತೆಂಗಿನಕಾಯಿ ಇವೇ ಮೊದಲಾದವುಗಳನ್ನು ಕೊಡುವ ಸಂಪ್ರದಾಯವಿದೆ.
ಈ ಸಂದರ್ಭದಲ್ಲಿ ಹಲವು ಆಟಗಳನ್ನೂ ಆಡುತ್ತಿದ್ದು ಅವುಗಳಲ್ಲಿ ಚೆನ್ನೆಮಣೆ ಬಹುಮುಖ್ಯವಾದುದು. ಅಕ್ಕ-ತಂಗಿ, ಅಣ್ಣ-ತಮ್ಮ ಈ ಆಟವನ್ನು ಆಡಬಾರದು ಎಂದೂ ಹೇಳುತ್ತಾರೆ.
ಒಟ್ಟಿನಲ್ಲಿ ತುಳುವರಿಗೆ 'ಆಟಿ' ಕಷ್ಟದ ತಿಂಗಳೇ ಆದರೂ ಇಷ್ಟದ ತಿಂಗಳೂ ಹೌದು. ಈಗ ಈ ಆಚರಣೆಗಳೆಲ್ಲಾ ಮೂಲೆಗುಂಪಾಗುತ್ತಿವೆ. ಅಲ್ಲಿಲ್ಲಿ ಹಲವು ಸಂಘ-ಸಂಸ್ಥೆಗಳು ಆಟಿಕೂಟಗಳನ್ನು ನಡೆಸುತ್ತವೆಯಾದರೂ ಅಲ್ಲಿ ಆಡಂಬರವಿಲ್ಲದೆ ಮುಂದಿನ ಪೀಳಿಗೆಗೆ ಹಿಂದಿನ ಬಡತನದ ಅರಿವು ಮೂಡಿಸುವ ಮಹತ್ತರ ಕೆಲಸವಾಗಬೇಕಿದೆ.
             ವನಜಾಕ್ಷಿ ಪಿ. ಚೆಂಬ್ರಕಾನ

Post a Comment

0 Comments