ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಅಡಿಕೆ ತೋಟಗಳು ರೋಗಬಾಧೆಯಿಂದ ತತ್ತರಿಸುತ್ತಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ ತೋಟಗಳಲ್ಲಿ ಹರಡುತ್ತಿರುವ ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗವು ಕೃಷಿಕರ ಬದುಕನ್ನೇ ಕಸಿದುಕೊಳ್ಳುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಈ ಬಾಧೆಯು ಇಂದು ಮಹಾಮಾರಿಯಂತೆ ಹರಡುತ್ತಿದ್ದು, ಬೆಳೆಗಾರರು ಅಸಹಾಯಕರಾಗಿ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ಬಗ್ಗೆ ಸರ್ಕಾರ ಪರಿಹಾರ ಕ್ರಮವನ್ನು ಕೈಗೊಳ್ಳಲು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ನೀಡಿದ್ದಾರೆ.ಮಳೆ ಮತ್ತು ವಾತಾವರಣದಲ್ಲಿನ ಬದಲಾವಣೆಯು ರೋಗಾಣುಗಳ ಹರಡುವಿಕೆಗೆ ಪೂರಕವಾಗಿ ಪರಿಣಮಿಸಿದ್ದು, ಎಳೆಯ ಅಡಿಕೆ ಕಾಯಿಗಳು ಹಣ್ಣಾಗುವ ಮೊದಲೇ ಉದುರಿ ಬೀಳುತ್ತಿವೆ. ಇದರಿಂದಾಗಿ ಇಳುವರಿಯಲ್ಲಿ ಶೇ. 80ಕ್ಕೂ ಅಧಿಕ ಕುಸಿತ ಕಂಡುಬಂದಿದ್ದು, ಅಡಿಕೆ ಕೃಷಿಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಕೃಷಿಕರು ತಮ್ಮ ಉಳಿತಾಯದ ಹಣವನ್ನೆಲ್ಲ ಕ್ರಿಮಿನಾಶಕ ಮತ್ತು ಗೊಬ್ಬರಗಳಿಗಾಗಿ ವ್ಯಯಿಸುತ್ತಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಾರ್ಮಿಕರ ಕೊರತೆ ಮತ್ತು ಕೃಷಿ ಸಲಕರಣೆಗಳ ಬೆಲೆ ಏರಿಕೆಯು ಬೆಳೆಗಾರರ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಶಾಸಕರು ವಿವರಿಸಿದ್ದಾರೆ.
ಈ ಗಂಭೀರವಾದ ಪರಿಸ್ಥಿತಿಯನ್ನು ಸರ್ಕಾರವು ತುರ್ತಾಗಿ ಪರಿಗಣಿಸಬೇಕೆಂದು ಒತ್ತಾಯಿಸಿರುವ ಅಶ್ರಫ್ ಅವರು, ಕೃಷಿ ಇಲಾಖೆಯ ತಜ್ಞರು ತಕ್ಷಣವೇ ಜಿಲ್ಲೆಯ ತೋಟಗಳಿಗೆ ಭೇಟಿ ನೀಡಿ ವೈಜ್ಞಾನಿಕ ಪರಿಹಾರೋಪಾಯಗಳನ್ನು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ. ರೋಗಬಾಧೆಯಿಂದ ಸಂಪೂರ್ಣ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಹಾಗೂ ಕೃಷಿ ಸಾಲಗಳ ಮರುಪಾವತಿಗೆ ವಿನಾಯಿತಿ ನೀಡಬೇಕು ಎಂಬುದು ಕೃಷಿಕರ ಪ್ರಮುಖ ಬೇಡಿಕೆಯಾಗಿದೆ. ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

0 Comments