ಪೆರ್ಲ : ಸ್ಷಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಕುಸುಮಾವತಿ ಟೀಚರ್ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಾರಿ ಪಂಚಾಯತ್ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿಗೊಳಪಟ್ಟಿದ್ದು ಕಳೆದ ಸಲ ಬಣ್ಪುತಡ್ಕ ವಾರ್ಡ್ ನಲ್ಲಿ ಪಂ.ಪ್ರತಿನಿಧಿಯಾಗಿದ್ದ ಟೀಚರರನ್ನು ಯುಡಿಎಫ್ ಈ ಭಾರಿ ಶೇಣಿ ವಾರ್ಡಿನಿಂದ ಸ್ಪರ್ಧಾ ಕಣಕ್ಕಿಳಿಸಿ ಚುನಾಯಿತ ಸದಸ್ಯೆಯನ್ನಾಗಿಸಿತ್ತು.
ಕಾಸರಗೋಡು ಜಿಲ್ಲೆಯ ದೇಲಂಪಾಡಿ ಪಂಚಾಯತ್ ನ ಬಲವಂತಡ್ಕ ಕೃಷ್ಣಪ್ಪ ನಾಯ್ಕ್ ಮತ್ತು ಪಾರ್ವತಿ ದಂಪತಿಯರ ಪ್ರಥಮ ಪುತ್ರಿಯಾದ ಕುಸುಮಾವತಿ ಜಿ ಹೆಚ್ ಎಸ್ ಎಸ್ ಪಾಂಡಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಜಿ.ಹೆಚ್. ಎಸ್ ಅಡೂರ್ ನಲ್ಲಿ ಹೈಸ್ಕೂಲ್ ಶಿಕ್ಷಣ ಇಂದಿರಾ ನಗರ ಚೆರ್ಕಳದಲ್ಲಿ ಪಿ ಡಿ ಸಿ ಪದವಿ ಗಳಿಸಿದ್ದಾರೆ. ಸರ್ಪಂಗಳದ ಮಹಾಲಿಂಗ ನಾಯ್ಕ ಎಂಬವರನ್ನು ವಿವಾಹಿತರಾದ ಇವರು 1998ರಿಂದ ಎಣ್ಮಕಜೆ ಪಂಚಾಯತ್ ನ ಮಣಿಯಂಪಾರೆ ಅಂಗನವಾಡಿಯಲ್ಲಿ ಸೇವೆ ಸಲ್ಲಿಸಿದರು. ಬಳಿಕ 2008ರಿಂದ ಸರ್ಪಂಗಳ ಅಂಗನವಾಡಿಗೆ ವರ್ಗಾವಣೆಗೊಂಡ ಟೀಚರ್ ತನ್ನ ಸೇವೆಯ ಜತೆಗೆ ಜನಾನುರಾಗಿಯಾಗಿ ಗುರುತಿಸಿಕೊಂಡವರಾಗಿದ್ದಾರೆ. 3 ವರ್ಷಗಳ ಕಾಲ ಕುಟಂಬಶ್ರೀ ಎಡಿಎಸ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು. ತನ್ನ ಸಮಾಜದಲ್ಲೂ ಸಂಘಟನಾತ್ಮಕ ನಿಲುವಿನಿಂದ ಶ್ರೀ ಶಾರದಾ ಮರಾಠಿ ಮಹಿಳಾ ಸಂಘದ ಉಪಾಧ್ಯಕ್ಷೆಯಾಗಿದ್ದಾರೆ. ಕುಂಬಳೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಸದಸ್ಯೆಯಾಗಿಯೂ ಗುರುತಿಸಿಕೊಂಡಿದ್ದ ಕುಸುಮಾವತಿ ಟೀಚರ್ ಇದೀಗ ಪಂ.ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.

0 Comments