ಪೆರ್ಲ : ಎಣ್ಮಕಜೆ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಬಳಿಕ ಮುಸ್ಲಿಂ ಲೀಗ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಲೀಗ್ ಪಂಚಾಯತ್ ಸಮಿತಿಯನ್ನು ವಿಸರ್ಜಿಸಲಾಯಿತು. ಪದಾಧಿಕಾರಿಗಳು ಕೇಂದ್ರಿಯ ಸಮಿತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು ಕಚೇರಿಯನ್ನು ಮುಚ್ಚಿ ಬೀಗ ಜಡಿದು ಕೀಲಿ ಕೈಯನ್ನು ಲೀಗ್ ಮಂಡಲ ಸಮಿತಿಗೆ ಹಸ್ತಾಂತರಿಸಲಾಗಿದೆ. ಇದೀಗ ಯೂತ್ ಲೀಗ್ ಪಂಚಾಯತ್ ಸಮಿತಿಯೂ ವಿಸರ್ಜನೆಗೆ ಸಿದ್ಧತೆ ನಡೆಸುತ್ತಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ನಿನ್ನೆ ನಡೆದ ಎಣ್ಮಕಜೆ ಪಂ.ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನ ಹಂಚಿಕೆಯ ಬಳಿಕ ಈ ಅಚ್ಚರಿಯ ವಿದ್ಯಮಾನ ನಡೆದಿರುವುದು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದೆ.
18 ವಾರ್ಡಿನ ಪಂಚಾಯತ್ ಸಮಿತಿಯಲ್ಲಿ, ಯುಡಿಎಫ್ ಎಂಟು ಸದಸ್ಯರನ್ನು ಹೊಂದಿದೆ (ಕಾಂಗ್ರೆಸ್ - 4, ಲೀಗ್ - 4), ಬಿಜೆಪಿ ಆರು ಮತ್ತು ಎಡರಂಗ ನಾಲ್ವರನ್ನು ಹೊಂದಿದ್ದು , ನಿನ್ನೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿತ್ತು. ಅತಿ ಹೆಚ್ಚು ಸದಸ್ಯತ್ವ ಬಲವುಳ್ಳ ಯುಡಿಎಫ್ ನ್ನು ಪಂಚಾಯತ್ ಆಡಳಿತ ಸಮಿತಿ ರಚನೆಗೆ ತೀರ್ಮಾನಿಸಲಾಗಿತ್ತು.
ಇದರಂತೆ ಕಾಂಗ್ರೆಸ್ ಸದಸ್ಯೆ ಕುಸುಮಾವತಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಸಿದ್ದಿಕ್ ಒಲಮುಗರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಇದಾದ ಕೆಲವೇ ಗಂಟೆಗಳೊಳಗೆ ಯುಡಿಎಫ್ ನ ಅಂತರಿಕ ಭಿನ್ನಮತ ಸ್ಪೋಟಗೊಂಡಿದ್ದು ಮುಸ್ಲಿಂ ಲೀಗ್ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದರು ಎನ್ನಲಾಗಿದೆ.
ಲೀಗ್ ಕಾರ್ಯಕರ್ತರ ಒಂದು ವಿಭಾಗದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದ್ದು, ಕಾಂಗ್ರೆಸ್ 14 ವಾರ್ಡ್‌ಗಳಲ್ಲಿ ಸ್ಪರ್ಧಿಸಿ 10 ವಾರ್ಡ್‌ಗಳಲ್ಲಿ ಸೋತಿದೆ, ಆದರೆ ಲೀಗ್ ನಾಲ್ಕು ವಾರ್ಡ್‌ಗಳಲ್ಲಿ ಸ್ಪರ್ಧಿಸಿ ನಾಲ್ಕರಲ್ಲೂ ಗೆದ್ದಿದೆ, ಆದ್ದರಿಂದ ಲೀಗ್ ಅಧ್ಯಕ್ಷ ಸ್ಥಾನಕ್ಕೆ ಅರ್ಹವಾಗಿದೆ ಎಂದು ಅವರು ಹೇಳುತ್ತಾರೆ.
ಯುಡಿಎಫ್ ನ ಅಧಿಕಾರ ಹಂಚಿಕೆ ವಿಚಾರದಲ್ಲಿ ಹಿಂದಿನಿಂದಲೂ ಹಗ್ಗ ಜಗ್ಗಾಟ ನಡೆಯುತ್ತಿದ್ದು ಇದೀಗ ಅಂತರಿಕ ವಿವಾದ ಬಹಿರಂಗಗೊಂಡಂತಾಗಿದೆ. ನಾಲ್ಕು ಬಾರಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಆಯಿಷಾ ಅವರನ್ನು ಪಂಚಾಯತ್ ಅಧ್ಯಕ್ಷರಾಗಿಸಬೇಕಿತ್ತು ಎಂಬುದು ಲೀಗ್ ಕಾರ್ಯಕರ್ತರ ಒಂದು ವಿಭಾಗದ ಬೇಡಿಕೆಯಾಗಿತ್ತು ಎಂದು ಹೇಳಲಾಗುತ್ತಿದೆ. ಈ ಸಂದರ್ಭ ಮಂಜೇಶ್ವರ ಶಾಸಕ ಎಕೆಎಂ. ಅಶ್ರಫ್ ಮಧ್ಯಸ್ಥಿಕೆ ವಹಿಸಿ ಲೀಗ್ ಪಂಚಾಯತ್ ಸಮಿತಿಯ ಪದಾಧಿಕಾರಿಗಳ ಮನವೊಲಿಸಿದ್ದರು. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೂ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಗೆ ಹಂಚಿ ಹೋಗುವುದನ್ನು ತಪ್ಪಿಸಲು ಲೀಗ್ ಅಭ್ಯರ್ಥಿಯೇ ಉಪಾಧ್ಯಕ್ಷರಾಗಬೇಕೆಂದು ತಂತ್ರ ಹೆಣೆದು ಕಾರ್ಯಕರ್ತರನ್ನು ಸಮಾಧಾನಪಡಿಸಲಾಗಿತ್ತು ಎನ್ನಲಾಗುತ್ತಿದೆ.
ಇದರ ಬಳಿಕ ಸೀಟು ಹಂಚಿಕೆಯಾದ ಬಳಿಕ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬಂದ ಚರ್ಚಾಸ್ಪದ ಸಂಗತಿಗಳನ್ನು ಗಮನಿಸಿ ಲೀಗ್ ಕಾರ್ಯಕರ್ತರ ಅಂತರಿಕ ಭಿನ್ನಮತ ಉಲ್ಭಣಗೊಂಡಿದ್ದು ಪಕ್ಷದ ಕಚೇರಿಗೆ ಬೀಗ ಜಡಿದು ಸಾಮೂಹಿಕ ರಾಜಿನಾಮೆ ಸಲ್ಲಿಸುವ ತನಕವು ಮುಂದುವರಿದಿದೆ.ಇದಕ್ಕೆಲ್ಲ ಮುಖ್ಯ ಕಾರಣ ಶಾಸಕರ ಮಧ್ಯಸ್ಥಿಕೆಯ ಪರಿಣಾಮ ಎಂದು ಬಂಡಾಯಗಾರರು ದೂರಿದ್ದು ಇದೇ ರೀತಿ ಮಂಜೇಶ್ವರ ಮಂಡಲದ ಹಲವು ಪಂಚಾಯತುಗಳಲ್ಲಿ ಶಾಸಕರ ವಿರುದ್ಧದ ಅಲೆ ಇದೀಗ ವ್ಯಕ್ತವಾಗುತ್ತಿದೆ. ಇನ್ನೇನು ಕೆಲವೇ ತಿಂಗಳುಗಳ ಅಂತರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಮುಸ್ಲಿಂ ಲೀಗ್ ನ ಭಿನ್ನಮತ ಶಾಸಕರಿಗೂ ಬಾಧಕವಾಗಲಿದೆ. ಈ ಬಗ್ಗೆ ಇದೀಗ ಸೋಶಿಯಲ್ ಮೀಡಿಯ ಯುದ್ದ ನಡೆಯುತ್ತಿದ್ದು ರಾಜಕೀಯ ರಂಗ ಇನ್ನೇನಾಗುತ್ತಿದೆ ಎಂದು ಕುತೂಹಲದಿಂದ ಗಮನಿಸುವಂತಾಗಿದೆ.


0 Comments