ಕಾಸರಗೋಡು : ವಿಧಾನ ಸಭಾ ಕ್ಷೇತ್ರದ ಮತದಾನ ಸಾಮಗ್ರಿಗಳ ಸಾಗಣೆ ಇಂದು ಯಶಸ್ವಿಯಾಗಿ ನಡೆದಿದೆ. ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಿಗೆ ಮತಗಟ್ಟೆ ಸಾಮಗ್ರಿಗಳ ವಿತರಣೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಿತು. ಟಿಐ ಎಚ್ಎಸ್ಎಸ್ ನಾಯನ್ಮಾರ್ ಮೂಲೆಯಿಂದ ಉದುಮ ಕ್ಷೇತ್ರಕ್ಕೆ ಮತಗಟ್ಟೆ ಸಾಮಗ್ರಿಗಳ ವಿತರಣೆ ನಡೆದಿದೆ ಮತ್ತು ಕಾಞಂಗಾಡು ಮತ್ತು ಉದುಮ ಕ್ಷೇತ್ರಗಳಿಗೆ ಮತಗಟ್ಟೆ ಸಾಮಗ್ರಿಗಳ ವಿತರಣೆ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.
ಮತದಾನ ಪ್ರಕ್ರಿಯೆಯ ಯಶಸ್ವಿ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ಥಾಪಿಸಲಾದ ವೆಬ್ಕಾಸ್ಟಿಂಗ್ ಕೊಠಡಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಮತದಾನದ ದಿನದಂದು, ಎಲ್ಲಾ ಮತಗಟ್ಟೆಗಳು ಮತ್ತು ಮತಗಟ್ಟೆ ಆವರಣಗಳು ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿರುತ್ತವೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 11,03,618 ಮತದಾರರಿದ್ದಾರೆ. ಇದರಲ್ಲಿ 5,44,543 ಪುರುಷರು, 5,59,063 ಮಹಿಳೆಯರು ಮತ್ತು 12 ಟ್ರಾನ್ಸ್ಜೆಂಡರ್ಗಳು ಸೇರಿದ್ದಾರೆ. ಜಿಲ್ಲೆಯಲ್ಲಿ 1146 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಹಿಳೆಯರು ಮಾತ್ರ ಮತಗಟ್ಟೆ ಅಧಿಕಾರಿಗಳಾಗಿರುವ ಐದು ಪಿಂಕ್ ಮತಗಟ್ಟೆಗಳು ಮತ್ತು ಒಂದು ಅಂಗವಿಕಲರ ಮತಗಟ್ಟೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಚುನಾವಣೆಗೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಸಂಜೆ ಜಾರಿಗೆ ಬಂದ ನಿಷೇಧಾಜ್ಞೆ ಶುಕ್ರವಾರ ಬೆಳಿಗ್ಗೆಯವರೆಗೆ ಮುಂದುವರಿಯಲಿದೆ.
ಚಿತ್ರಗಳು : ಶ್ರೀಕಾಂತ್ ಕಾಸರಗೋಡು




0 Comments