ಚಿಕ್ಕಮಗಳೂರು : ಗಂಡ ಸತ್ತು 10 ದಿನ ಕಳೆದು ಮೃತದೇಹ ಹುಳ ಬಿದ್ದರೂ ಮಾನಸಿಕ ಅಸ್ವಸ್ಥ ಪತ್ನಿ ಶವದ ಜೊತೆಯೇ ಬದುಕಿದ ಹೃದಯವಿದ್ರಾವಕ ಘಟನೆಯೊಂದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಲ್ಲಿ ನಡೆದಿದೆ. ವಾಸನೆ ಬಂದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರಲ್ಲಿ 'ನನ್ನ ಗಂಡ ನನಗೆ ಬೇಕು, ಅವರನ್ನು ಕರೆದೊಯ್ಯಬೇಡಿ' ಎಂದು ಮಹಿಳೆ ಅಂಗಲಾಚಿದ ದೃಶ್ಯ ಸ್ಥಳೀಯರ ಕಣ್ಣು ತೇವಗೊಳಿಸಿತ್ತು. ಬಣಕಲ್ ಗ್ರಾಮದ ನಿವಾಸಿ ಸಿರಿಲ್ ಮೋನಿಸ್ (77) ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು 10 ದಿನಗಳ ಹಿಂದೆಯೇ ಸಾವನ್ನಪ್ಪಿದ್ದರು. ಆದರೆ, ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಪತಿ ಸಾವನ್ನಪ್ಪಿರುವುದು ತಿಳಿಯದೆ ಹತ್ತು ದಿನಗಳ ಕಾಲ ಕೊಳೆತು ಹುಳ ಬಿದ್ದಿದ್ದ ಶವದ ಜೊತೆಯಲ್ಲೇ ವಾಸವಾಗಿದ್ದರು.
ಸಿರಿಲ್ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗಲೆಲ್ಲಾ ಅಪ್ಪ ಚೆನ್ನಾಗಿದ್ದಾರೆ ಎಂದು ತಾಯಿ ಉತ್ತರಿಸುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದು ಅಪ್ಪನನ್ನು ಡಾಕ್ಟರಲ್ಲಿ ತಪಾಸಣೆ ಮಾಡಿಸಿ ಹೋಗಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಸಿಕ್ಕಿರಲಿಲ್ಲ. ಸಮಾಜ ಸೇವಕ ಆರೀಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು. ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

0 Comments