ಕಾಸರಗೋಡು: ಬಾಲಗೋಕುಲ ಉತ್ತರ ಕೇರಳ ಇದರ ರಾಜ್ಯ ವಾರ್ಷಿಕ ಸಮ್ಮೇಳನವು ಜು.10, 11, 12ರಂದು ಕಾಸರಗೋಡು ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬಾಲಗೋಕುಲ ಉತ್ತರ ಕೇರಳ ಸಮಿತಿಯ ಉಪಾಧ್ಯಕ್ಷ ಪಿ.ಎಂ.ಶ್ರೀಧರನ್ ಮಾಸ್ತರ್ ಪ್ರೆಸ್‌ಕ್ಲಬ್ ನಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.10ರಂದು ಬೆಳಗ್ಗೆ 10.30ರಿಂದ ಸಂಜೆ 6ರ ತನಕ ಪ್ರಾಂತ ನಿರ್ವಾಹಕ ಸಮಿತಿ ಸಭೆ ನಡೆಯಲಿದೆ. ಜು.11ರಂದು ಬೆಳಗ್ಗೆ 10.30ಕ್ಕೆ ಜರಗುವ ಕಾರ್ಯಕರ್ತರ ಅಭ್ಯಾಸ ವರ್ಗವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಉತ್ತರ ಕೇರಳ ಸಮಿತಿಯ ಅಧ್ಯಕ್ಷ ಎಂ.ಸಶ್ವನ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಎಂ.ರಾಧಾಕೃಷ್ಣನ್ ಅವರು ನವಯುಗದ ಸಂಘಟಕ ಎಂಬ ವಿಷಯವನ್ನು ಮಂಡಿಸಿ ಮಾತನಾಡುವರು. ಉತ್ತರ ಕೇರಳ ಇದರ ಭಗಿನಿ ಪ್ರಮುಖ್ ಸ್ಥಿತಾ ವತ್ಸಲನ್ ಉಪಸ್ಥಿತರಿರುವರು. ಮಧ್ಯಾಹ್ನ 12ರಿಂದ ವರದಿ ಮಂಡನೆ, ಬಾಲಸಭೆ, ದುಷ್ಟರ ಜಾಲಕ್ಕೆ ಬೀಳದೆ ಬೆಳೆಯೋಣ ಎಂಬ ವಿಷಯವನ್ನು ಬಾಲಗೋಕುಲಕೇರಳ ಇದರ ಉಪಾಧ್ಯಕ್ಷ ಕೆ.ಪಿ.ಬಾಬುರಾಜನ್ ಮಾಸ್ತರ್ ಮಂಡಿಸುವರು. ಅಪರಾಹ್ನ 2.10ರಿಂದ ವರದಿ ವಿಶ್ಲೇಷಣೆ, 2.40ರಿಂದ ಗೋಕುಲ ಜಿಲ್ಲಾ ಮೇಲ್ಪಟ್ಟು ಕಾರ್ಯದರ್ಶಿಗಳ ಗಣ, ತಾಲೂಕು ಮೇಲ್ಪಟ್ಟ ಅಧ್ಯಕ್ಷರುಗಳ ಗಣ, ತಾಲೂಕು ಮೇಲ್ಪಟ್ಟ ಕೋಶಾಧಿಕಾರಿಗಳ ಗಣ, ತಾಲೂಕು ಉನ್ನತ ಭಗಿನಿ ಗಣ, ತಾಲೂಕು ಉನ್ನತ ಸಮಿತಿ ಸದಸ್ಯರ ಶ್ರೇಣಿ ಸಮಿತಿಗಳ ಸಭೆ, 2.40ರಿಂದ ನಡೆಯುವ ಬಾಲಸಭೆಯಲ್ಲಿ ಅಮೃತ ಭಾರತಕ್ಕೆ ಗೋಕುಲ ನೇತೃತ್ತ ಎಂಬ ವಿಷಯವನ್ನು ಬಾಲಗೋಕುಲ ಕೇರಳ ಇದರ ಉಪಾಧ್ಯಕ್ಷ ಎನ್.ಹರೀಂದ್ರನ್ ಮಾಸ್ತರ್ ವಿಷಯ ಮಂಡಿಸುವರು. ಸಂಜೆ 4.45ರಿಂದ ಶ್ರೀಕೃಷ್ಣ ಜಯಂತಿ ಚರ್ಚೆ, 5.15ರಿಂದ ಜರಗುವ ಬಾಲ ಪ್ರತಿಭಾ ಸಂಗಮವನ್ನು ಚಿನ್ಮಯ ಮಿಷನ್‌ನ ರಾಜ್ಯಾಧ್ಯಕ್ಷ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸುವರು. ರಾತ್ರಿ 7ರಿಂದ ರಾಜೇಶ್ ನಾದಾಪುರಂ ಅವರಿಂದ ಬೌದ್ಧಿಕ್, 9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜು.12ರಂದು ಬೆಳಗ್ಗೆ 7.30ರಿಂದ ಗೋಕುಲ ಜಿಲ್ಲಾ ಸಂಪೂರ್ಣ ಸಮಿತಿ ಸಭೆ, 10 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಕೊಂಡವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನಗೈಯ್ಯುವರು. ಕೇಂದ್ರ ವಿದ್ಯುಚ್ಚಕ್ತಿ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸೋ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಉತ್ತರ ಕೇರಳ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಎನ್. ಎಂ.ಸದಾನಂದನ್ ವಾರ್ಷಿಕ ವರದಿ ಮಂಡಿಸುವರು. ಬಾಲಗೋಕುಲ ಮತ್ತು ಸಮಾಜ ಪರಿವರ್ತನೆ ಎಂಬ ವಿಷಯದ ಕುರಿತು ಪ್ರಾಂತ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಪ್ರವಚನ ನಡೆಸುವರು. ಬಾಲಸಂಸ್ಕಾರ ಕೇಂದ್ರದ ಅಧ್ಯಕ್ಷ ಪಿ.ಕೆ.ವಿಜಯ ರಾಘವನ್ ಹಸ್ತಪ್ರತಿ ಪತ್ರಿಕೆಯ ಫಲಿತಾಂಶ ಘೋಷಣೆ, ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಮಧ್ಯಾಹ್ನ 12ರಿಂದ ನಡೆಯುವ ಪ್ರತಿನಿಧಿ ಸಭೆಯಲ್ಲಿ ಪಿ.ಎಂ.ಶ್ರೀಧರನ್ ಮಾಸ್ತರ್ ಅಧ್ಯಕ್ಷತೆ ವಹಿಸಿ ನಿರ್ಣಯ ಮಂಡಿಸುವರು. ಪ್ರಾಂಶ ಕಾರ್ಯದರ್ಶಿ ಯು.ಪ್ರಭಾಕರನ್ ಮಾಸ್ತರ್ ಅನುವಾದಿಸುವರು. ಪ್ರಾಂಶ ಸಂಘಟನಾ ಕಾರ್ಯದರ್ಶಿ ಎಸ್.ಆರ್. ಕಣ್ಣನ್ ಪದಾಧಿಕಾರಿಗಳನ್ನು ಘೋಷಿಸುವರು. ನಂತರ ವಾರ್ಷಿಕ ಯೋಜನೆ, ಸಮಾರೋಪ ಸಂದೇಶ, ಧ್ವಜಾವರೋಹಣ, ಮಂಗಳಶ್ಲೋಕದೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಗಲಿದೆ.ಈ ಸಮ್ಮೇಳನ ದಲ್ಲಿ ಸುಮಾರು 1100 ಮಂದಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹರಿಶ್ಚಂದ್ರ ನಾಯ್ (ನಿವೃತ್ತ ಪೊಲೀಸ್ ಅಧಿಕಾರಿ), ರವೀಂದ್ರ ರೈ ಸಿರಿಬಾಗಿಲು (ಪ್ರಚಾರ ಸಮಿತಿ ಸಂಚಾಲಕ), ಕೆ.ಜಯರಾಮ ಶೆಟ್ಟಿ (ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ), ರಾಜೇಂದ್ರ ಮವ್ವಾರು (ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ) ಉಪಸ್ಥಿತರಿದ್ದರು.

0 Comments