ತಿರುವನಂತಪುರ : ಮೀನು ಫ್ರೈನಲ್ಲಿ ಸತ್ತ ಚೇರಟೆ ಹುಳ ( ರೆಡ್ ಮಿಲಿಪೀಡ್) ಪತ್ತೆಯಾದ ಹಿನ್ನೆಲೆಯಲ್ಲಿ ತಿರುವನಂತಪುರಂನ ಕ್ಯಾಂಟೋನ್‌ಮೆಂಟ್ ಪೊಲೀಸ್ ಕ್ಯಾಂಟೀನ್‌ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಮಂಗಳವಾರ ಮಧ್ಯಾಹ್ನ ಪೊಲೀಸ್ ಸಿಬ್ಬಂದಿಯೊಬ್ಬರು ಕ್ಯಾಂಟೀನ್‌ನಿಂದ ಪಾರ್ಸೆಲ್ ರೂಪದಲ್ಲಿ ಮೀನು ಫ್ರೈ ಖರೀದಿಸಿದ್ದರು. ಮನೆಗೆ ತೆರಳಿ ಊಟ ಮಾಡಲು ಪಾರ್ಸೆಲ್ ತೆರೆದಾಗ ಮೀನು ಫ್ರೈನಲ್ಲಿ ಸತ್ತ ಚೇರಟೆ ಹುಳ ಕಂಡುಬಂದಿದೆ. ಈ ಕುರಿತು ಮಾಹಿತಿ ತಿಳಿದ ತಕ್ಷಣ ಪಾಲಿಕೆ ಅಧಿಕಾರಿಗಳು ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಕ್ಯಾಂಟೀನ್ ಅತ್ಯಂತ ಅಸ್ವಚ್ಛ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಆಹಾರ ಮಳಿಗೆಯನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಅಲ್ಲದೆ, ಕ್ಯಾಂಟೀನ್‌ನ ಗುತ್ತಿಗೆದಾರರಿಗೆ ಖುದ್ದಾಗಿ ಹಾಜರಾಗುವಂತೆ ಪಾಲಿಕೆ ನೋಟಿಸ್ ನೀಡಿದೆ.
ಈ ಕ್ಯಾಂಟೀನ್‌ನ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ಈ ಹಿಂದೆಯೂ ಹಲವು ದೂರುಗಳು ಕೇಳಿಬಂದಿದ್ದವು. ಆದರೆ, ನಿಯಂತ್ರಣ ಕೊಠಡಿ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿಗೆ ಇದೇ ಕ್ಯಾಂಟೀನ್ ಪ್ರಮುಖ ಆಹಾರ ಕೇಂದ್ರವಾಗಿದ್ದ ಕಾರಣ, ಬಹುತೇಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ.
ಇತ್ತೀಚಿನ ಘಟನೆ ಬಳಿಕ ಆಹಾರದ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

0 Comments