Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಸ್ವಯಂ ಆರೈಕೆ ಮೊದಲ ಆದ್ಯತೆಯಾಗಲಿ

                                                                            ಸಾಂದರ್ಭಿಕ ಚಿತ್ರ

ಧಾವಂತದ ಬದುಕು, ಒತ್ತಡದ ಕೆಲಸ ಮತ್ತು ನಿತ್ಯದ ಜಂಜಾಟದಲ್ಲಿ ನಾವು ನಮ್ಮ ಸ್ವಂತ ಆರೋಗ್ಯವನ್ನು ಮರೆಯುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. 'ದೇಹವೇ ದೇಗುಲ' ಎಂಬ ನಾಣ್ಣುಡಿ ಕೇವಲ ಮಾತಿಗೆ ಮಾತ್ರ ಉಳಿದಿದೆಯೇ ಎನ್ನುವಂತಿರುವ ಇಂದಿನ ಕಾಲಘಟ್ಟದಲ್ಲಿ, ನಮ್ಮ ಆರೋಗ್ಯವನ್ನು ನಾವೇ ಕಾಳಜಿ ಮಾಡಿಕೊಳ್ಳುವ ಮಹತ್ವವನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 24ರಂದು ಅಂತರರಾಷ್ಟ್ರೀಯ ಸ್ವಯಂ ಆರೈಕೆ ದಿನ (International Self-Care Day)ವನ್ನು ಆಚರಿಸಲಾಗುತ್ತದೆ. ಜುಲೈ 24 ರಂದೇ ಈ ದಿನವನ್ನು ಆಚರಿಸಲು ಒಂದು ವೈಜ್ಞಾನಿಕ ಹಿನ್ನೆಲೆಯಿದೆ. ಗಡಿಯಾರದ ಮುಳ್ಳಿನಂತೆ ವಾರದ 7 ದಿನಗಳು, ದಿನದ 24 ಗಂಟೆಯೂ (24/7) ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಮಗೆ ಕಾಳಜಿ ಇರಬೇಕು ಎಂಬುದನ್ನು ಸಂಕೇತಿಸಲು 24/7 (ಜುಲೈ 24) ದಿನವನ್ನು ಆಯ್ಕೆ ಮಾಡಲಾಗಿದೆ.

ಸ್ವಯಂ ಆರೈಕೆ ಅಂದರೆ ಕೇವಲ ಸ್ವಾರ್ಥವಲ್ಲ ಅಥವಾ ದಿನಕ್ಕೊಮ್ಮೆ ಐಷಾರಾಮಿ ಚಿಕಿತ್ಸೆ ಪಡೆಯುವುದಲ್ಲ. ಬದಲಿಗೆ, ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಾವೇ ಜವಾಬ್ದಾರರಾಗಿರುವುದು. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳು ತಮ್ಮ ಆರೋಗ್ಯವನ್ನು ತಾವೇ ಉತ್ತೇಜಿಸಿಕೊಳ್ಳುವುದು, ರೋಗಗಳನ್ನು ತಡೆಯುವುದು ಮತ್ತು ವೃತ್ತಿಪರರ ಸಹಾಯವಿಲ್ಲದೆ ಅಥವಾ ಅವರ ಸಹಯೋಗದೊಂದಿಗೆ ಅನಾರೋಗ್ಯವನ್ನು ನಿರ್ವಹಿಸುವುದೇ ಸ್ವಯಂ ಆರೈಕೆ. ಕೇವಲ ಅನಾರೋಗ್ಯ ಬಂದಾಗ ಚಿಕಿತ್ಸೆ ಪಡೆಯುವುದು ಮಾತ್ರವಲ್ಲ. ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ, ವೈಯಕ್ತಿಕ ಸ್ವಚ್ಛತೆ, ಮಾನಸಿಕ ಆರೋಗ್ಯದ ಕಡೆ ಗಮನ, ಒತ್ತಡವನ್ನು ನಿಯಂತ್ರಿಸುವುದು ಹಾಗೂ ಅಗತ್ಯವಿದ್ದಾಗ ವೈದ್ಯರ ಸಲಹೆ ಪಡೆಯುವುದು ಕೂಡ ಸ್ವಯಂ ಆರೈಕೆಯ ಪ್ರಮುಖ ಅಂಶಗಳಾಗಿವೆ.

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವಯಂ ಆರೈಕೆಯ ಮಹತ್ವವನ್ನು ಅರಿತು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸ್ವಯಂ ಆರೈಕೆಯು ವ್ಯಕ್ತಿಯ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯನ್ನೂ ವೃದ್ಧಿಸುತ್ತದೆ. ಪ್ರತಿದಿನ ಸ್ವಲ್ಪ ಸಮಯವನ್ನು ನಮ್ಮ ಆರೋಗ್ಯಕ್ಕಾಗಿ ಮೀಸಲಿಡುವುದು, ಸಮತೋಲನಯುತ ಆಹಾರ ಸೇವಿಸುವುದು, ಯೋಗ ಅಥವಾ ಧ್ಯಾನ ಅಭ್ಯಾಸ ಮಾಡುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಹಾಗೂ ಡಿಜಿಟಲ್ ಸಾಧನಗಳಿಂದ ಕೆಲಕಾಲ ದೂರವಿರುವುದು ಉತ್ತಮ ಜೀವನಕ್ಕೆ ಸಹಕಾರಿಯಾಗುತ್ತದೆ. ಆಯಾ ವ್ಯಕ್ತಿಯ ಆರೋಗ್ಯದ ಹೊಣೆಗಾರಿಕೆ ಅವರವರ ಕೈಯಲ್ಲೇ ಇದೆ. ಆರೋಗ್ಯಕರ ಅಭ್ಯಾಸಗಳನ್ನು ಜೀವನದ ಭಾಗವನ್ನಾಗಿಸಿದರೆ, ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಪೌಷ್ಟಿಕ ಆಹಾರ ಸೇವನೆ : ಜಂಕ್ ಫುಡ್‌ಗಳಿಗೆ ವಿದಾಯ ಹೇಳಿ, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು. ದೈಹಿಕ ಚಟುವಟಿಕೆ : ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ಯೋಗ, ಧ್ಯಾನ ಅಥವಾ ವೇಗದ ನಡಿಗೆಯನ್ನು ರೂಢಿಸಿಕೊಳ್ಳುವುದು. ಮಾನಸಿಕ ನೆಮ್ಮದಿ : ಅತಿಯಾದ ಯೋಚನೆಗೆ ಕಡಿವಾಣ ಹಾಕಿ, ಮನಸ್ಸಿಗೆ ಮುದ ನೀಡುವ ಹವ್ಯಾಸಗಳ(ಪುಸ್ತಕ ಓದುವುದು, ಸಂಗೀತ ಕೇಳುವುದು, ಪ್ರಕೃತಿಯೊಂದಿಗೆ ಸಮಯ ಕಳೆಯುವುದು) ಕಡೆ ಗಮನಹರಿಸುವುದು. ಉತ್ತಮ ನಿದ್ರೆ : ರಾತ್ರಿ ವೇಳೆ ಕನಿಷ್ಠ 7 ರಿಂದ 8 ಗಂಟೆಗಳ ಗಾಢ ನಿದ್ರೆ ದೇಹದ ಜೀವಕೋಶಗಳ ರಿಪೇರಿಗೆ ಅತ್ಯಗತ್ಯ. ನಿಯಮಿತ ಆರೋಗ್ಯ ತಪಾಸಣೆ : ಯಾವುದೇ ಕಾಯಿಲೆ ಬಾರದಿದ್ದರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬುದ್ಧಿವಂತಿಕೆ.

ಇವೆಲ್ಲವನ್ನೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವು ಸ್ವಲ್ಪಮಟ್ಟಿಗಾದರೂ ಕಾಪಾಡಿಕೊಳ್ಳಬಹುದು.

ಅಂತರರಾಷ್ಟ್ರೀಯ ಸ್ವಯಂ ಆರೈಕೆ ದಿನವು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ, "ನಮ್ಮ ಆರೋಗ್ಯ – ನಮ್ಮ ಹೊಣೆ" ಎಂಬ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ. ಆರೋಗ್ಯಕರ ವ್ಯಕ್ತಿಗಳಿಂದಲೇ ಆರೋಗ್ಯಕರ ಕುಟುಂಬ, ಆರೋಗ್ಯಕರ ಸಮಾಜ ಮತ್ತು ಆರೋಗ್ಯಕರ ರಾಷ್ಟ್ರ ನಿರ್ಮಾಣ ಸಾಧ್ಯ. ಆದ್ದರಿಂದ, ಪ್ರತಿಯೊಬ್ಬರೂ ಸ್ವಯಂ ಆರೈಕೆಯನ್ನು ತಮ್ಮ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಆರೋಗ್ಯಕರ ಭವಿಷ್ಯವನ್ನು ನಿರ್ಮಿಸೋಣ. ಸಂಗ್ರಹ ಲೇಖನ : ವನಜಾಕ್ಷಿ ಪಿ ಚೆಂಬ್ರಕಾನ


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*

https://www.instagram.com/visheshachannel/ https://www.facebook.com/profile.php?id=61572771802334 https://x.com/VisheshaC4541 https://www.linkedin.com/in/visheshachannel/ www.youtube.com/@VisheshaChannelofficial

#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement