ಪೆರ್ಲ : ಬೆದ್ರಂಪಳ್ಳದ ಕ್ವಾರ್ಟರ್ಸ್ ವೊಂದರಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಶ್ರೀಹರಿ (12) ಎಂದು ಗುರುತಿಸಲಾಗಿದೆ. ಈತ ಪ್ರಕಾಶನ್–ಸುನಿತ ದಂಪತಿಯ ಪುತ್ರ. ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಿವಾಸಿಗಳಾಗಿರುವ ಇವರು ಕುಟುಂಬ ಸಮೇತ ಬೆದ್ರಂಪಳ್ಳದ ಅಬ್ದುಲ್ಲಕುಂಞಿ ಎಂಬವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಭಾನುವಾರ ಮಧ್ಯಾಹ್ನ ಪೋಷಕರು ಅಂಗಡಿಗೆ ಸಾಮಾನು ತರಲು ತೆರಳಿದ್ದ ವೇಳೆ ಶ್ರೀಹರಿ, ಸಹೋದರ-ಸಹೋದರಿಯರಾದ ಪ್ರೀತು ಮತ್ತು ನಿಹಾರಿಕಾ ಅವರೊಂದಿಗೆ ಕ್ವಾರ್ಟರ್ಸ್‌ನಲ್ಲಿ ಆಟವಾಡುತ್ತಿದ್ದರು. ಬಳಿಕ ಪೋಷಕರು ಹಿಂದಿರುಗಿದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹಲವು ಬಾರಿ ಕರೆದರೂ ಬಾಗಿಲು ತೆರೆಯದ ಕಾರಣ ಅದನ್ನು ಒಡೆದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶ್ರೀಹರಿ ಬಣ್ಪುತ್ತಡ್ಕ ಎ.ಯು.ಪಿ. ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0 Comments