ಬಂಟ್ವಾಳ : ಬಿ.ಸಿ. ರೋಡ್‌ನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಕಕ್ಯಪದವು ನಿವಾಸಿ ಲಾವಣ್ಯ ಎಂಬಾಕೆಯನ್ನು ತಲವಾರ್ ನಿಂದ ಬರ್ಬರವಾಗಿ ಕೊಲೆಗೈದು ತಲೆಮರೆಸಿಕೊಂಡಿದ್ದ ಆಕೆಯ ಸಂಬಂಧಿ, ಆರೋಪಿ ಚೇತನ್‌ನನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಚೇತನ್‌ನನ್ನು ಮಂಗಳೂರು ಸಮೀಪದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಈ ವೇಳೆ ಈತ ಅಸ್ವಸ್ಥನಾಗಿದ್ದು ವಿಷ ಆಹಾರ ಪ್ರಾಶನಗೈದಿರಬೇಕೆಂದು ಸಂಶಯ ಕಂಡು ಬಂದಿದ್ದು ಆರೋಪಿಯನ್ನು ಪೋಲಿಸ್ ಬಂದೋಬಸ್ತಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿ.ಬಿ. ರಿಷ್ಯಂತ್ ಅವರು ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿ ಚೇತನ್ ಮೃತ ಲಾವಣ್ಯಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದು, ಆಕೆ ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದೇ ಕೋಪದಲ್ಲಿ ಹೊಂಚುಹಾಕಿ ಬಸ್ ನಿಲ್ದಾಣದಲ್ಲೇ ಬರ್ಬರ ಹತ್ಯೆ ನಡೆಸಿದ್ದನು ಎನ್ನಲಾಗುತ್ತಿದೆ. ಆದರೆ ಅಮಾನುಷ ಕೊಲೆ ಕೃತ್ಯದ ನಿಖರ ಕಾರಣಗಳು ಬಂಧಿತನಿಂದ ಇನ್ನಷ್ಟೆ ಸಂಗ್ರಹಿಸಬೇಕಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

0 Comments