ಬದಿಯಡ್ಕ : ಕುಂಬಡಾಜೆ ಏತಡ್ಕದಲ್ಲಿ ಸೋಲಾರ್ ಡ್ರೈಯರ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 235 ಕೆ.ಜಿ. ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಿನ್ನಿಂಗಾರ್ ನಿವಾಸಿಗಳಾದ ಗಣೇಶ್ ಕೆ. (29), ಶಿಶಿರ್ ಕುಮಾರ್ (19) ಹಾಗೂ ಸತೀಶ (31) ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಏತ್ತಡ್ಕ ನಿವಾಸಿ ಇಬ್ರಾಹಿಂ ಅವರ ಮನೆಯ ಅಂಗಳದಲ್ಲಿದ್ದ ಸೋಲಾರ್ ಡ್ರೈಯರ್‌ನಲ್ಲಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಇಬ್ರಾಹಿಂ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಪ್ರಕರಣದ ಕುರಿತು ಬದಿಯಡ್ಕ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0 Comments