ಟೊಲೆಡೊ : ಮಧ್ಯ ಅರ್ಜೆಂಟೀನಾದ ಟೊಲೆಡೊದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ವಿಶ್ವದ ಗಮನ ಸೆಳೆದಿದೆ. ತರಬೇತಿ ವಿಮಾನ ಹಾರಾಟದ ವೇಳೆ ಅನುಭವಿ ಪೈಲಟ್ ಲಿಯಾಂಡ್ರೊ ಆಂಡ್ರೆಸ್ ಬರ್ಟಾಝೊ (42) ಅವರು ಹಾರುತ್ತಿದ್ದ ವಿಮಾನದಿಂದಲೇ ಜಿಗಿದು ಮೃತಪಟ್ಟಿದ್ದಾರೆ. ಆದರೆ ಅವರೊಂದಿಗೆ ತರಬೇತಿ ಪಡೆಯುತ್ತಿದ್ದ 22 ವರ್ಷದ ವಿದ್ಯಾರ್ಥಿನಿ ಅಸಾಧಾರಣ ಧೈರ್ಯ ಪ್ರದರ್ಶಿಸಿ ವಿಮಾನವನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಘಟನೆ ಶನಿವಾರ ನಡೆದಿದ್ದು, ಮಂಗಳವಾರ ದೇಶದ ಸಾರ್ವಜನಿಕ ಅಭಿಯೋಜಕರ ಕಚೇರಿ ಈ ಕುರಿತು ಮಾಹಿತಿ ನೀಡಿದೆ. ವರದಿಗಳ ಪ್ರಕಾರ, ಸೆಸ್ನಾ–150 ತರಬೇತಿ ವಿಮಾನದಲ್ಲಿ ಬರ್ಟಾಝೊ ಮತ್ತು ವಿದ್ಯಾರ್ಥಿನಿ ಮಾತ್ರ ಪ್ರಯಾಣಿಸುತ್ತಿದ್ದರು.
ವಿದ್ಯಾರ್ಥಿನಿಯ ಹೇಳಿಕೆಯಂತೆ, ಬರ್ಟಾಝೊ ಅವರು ಹೆಡ್‌ಸೆಟ್ ಹಾಗೂ ಸೀಟ್‌ಬೆಲ್ಟ್ ತೆಗೆದು, ವಿಮಾನದ ಬಾಗಿಲು ತೆರೆದ ನಂತರ, "ನೀನು ಏನು ಮಾಡಬೇಕೆಂದು ನಿನಗೆ ಗೊತ್ತಿದೆ... ಮುಂದುವರಿಸು" ಎಂದು ಹೇಳಿ ವಿಮಾನದಿಂದ ಜಿಗಿದಿದ್ದಾರೆ.
ಬರ್ಟಾಝೊ ಕಾರ್ಯನಿರ್ವಹಿಸುತ್ತಿದ್ದ ಫ್ಲೈಯಿಂಗ್ ಪ್ಯಾರಟ್ ಕಾರ್ಡೋಬಾ ಫ್ಲೈಯಿಂಗ್ ಶಾಲೆಯ ನಿರ್ದೇಶಕ ಎಡ್ವರ್ಡೊ ಅಲ್ವಾರೆಜ್, ಪೈಲಟ್ ಇಂತಹ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಯಾವುದೇ ಸುಳಿವು ನಮಗೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದೇ ದಿನ ಅವರು ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಸಹಜ ತರಬೇತಿ ಹಾರಾಟವನ್ನೂ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.
ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪೈಲಟ್ ವಿಮಾನದಿಂದ ಜಿಗಿಯಲು ಕಾರಣವೇನು ಎಂಬುದನ್ನು ಅರ್ಜೆಂಟೀನಾದ ತನಿಖಾ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

0 Comments