ಪೆರ್ಲ : ಎಣ್ಮಕಜೆ ಗ್ರಾ. ಪಂ. ನಲ್ಲಿ ಕೇರಳ ಜಲ ಪ್ರಾಧಿಕಾರದಿಂದ ಪೂರೈಕೆಯಾಗುವ ನೀರಿನ ಪೈಪ್ ಲೈನಿನಲ್ಲಿ ನೀರು ಬಾರದೆ ಗಾಳಿ ಮಾತ್ರ ಬರುತ್ತಿದೆ. ಪೂರೈಕೆಯೇ ಆಗದ ನೀರಿನ ಹೆಸರಲ್ಲಿ ಶುಲ್ಕ ಪಾವತಿಗೆ ಬಿಲ್ ಮಾತ್ರ ಬರುತ್ತಿದ್ದು , ಬಾರದ ನೀರಿಗೆ ಬಿಲ್ ಪಾವತಿಸಬೇಕೆಂದು ಸೂಚಿಸಿ ಜಲ ಪ್ರಾಧಿಕಾರದಿಂದ ನೂರಾರು ಜನರಿಗೆ ನೋಟೀಸು ಬಂದಿರುವುದರಿಂದ ಬಡ ಜನತೆ ಸಂದಿಗ್ದಾವಸ್ಥೆಗೊಳಗಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಪಂಚಾಯತ್ ಮಟ್ಟದಲ್ಲಿ ಬಳಕೆದಾರರ ಅದಾಲತ್ ನಡೆಸಿ ಪಾವತಿಗೆ ಬಾಕಿ ಇರುವ ಜಲ ಶುಲ್ಕದ ವಿಷಯ ಸಹಿತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕೆಂದು ಜಿ. ಪಂ. ಸದಸ್ಯ ಸೋಮಶೇಖರ್ ಜಿ. ಆಗ್ರಹಿಸಿದ್ದಾರೆ.
ಎಣ್ಮಕಜೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ತಿಂಗಳು ಉಚಿತವಾಗಿ ದೊರೆಯಬೇಕಾದ 15000 ಲೀಟರ್ ನೀರು ಪೂರೈಕೆ ಆಗುತ್ತಿಲ್ಲ. ಆದರೆ ಎಯರ್ ವಾಲ್ವ್ ಸಮಸ್ಯೆಯಿಂದ ಗಾಳಿ ಹರಿಯುತ್ತಿರುವುದರಿಂದ ಅಪರಿಮಿತವಾದ ಜಲ ಶುಲ್ಕದ ಬಿಲ್ ಬಳಕೆದಾರರಿಗೆ ಬರುತ್ತದೆ. ಬಾರದ ಮತ್ತು ಬಳಸದ ನೀರಿಗೆ ಅಧಿಕ ಶುಲ್ಕ ಪಾವತಿಸದೇ, ಜಲ ಸಂಪರ್ಕ ವಿಚ್ಛೇದಿಸಲು ಅರ್ಜಿ ಸಲ್ಲಿಸಿದ ಬಳಕೆದಾರರಿಗೂ ಜಲ ಶುಲ್ಕದ ಬಿಲ್ ಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಲಶುಲ್ಕ ಪಾವತಿ ಬಾಕಿಯಾದ ಬಳಕೆದಾರರ ಸಮಸ್ಯೆ ಪರಿಹಾರಕ್ಕೆಂದೇ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನೇತೃತ್ವದಲ್ಲಿ ಎಣ್ಮಕಜೆ ಪಂಚಾಯತ್ ನಲ್ಲಿ ನಡೆದ ಅದಾಲತ್ ನಲ್ಲೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಮಸ್ಯೆ ಇತ್ಯರ್ಥಗೊಳಿಸಲು ಅದಾಲತ್ ನಡೆಸಬೇಕೆಂದು ಸೋಮಶೇಖರ್ ಜೆ. ಎಸ್. ಆಗ್ರಹಿಸಿದ್ದಾರೆ.
ಎಣ್ಮಕಜೆ ಗ್ರಾ. ಪಂ. ವ್ಯಾಪ್ತಿಯ ಬಡ ಕೂಲಿ ಕಾರ್ಮಿಕ ಕೃಷಿಕ ಕುಟುಂಬಗಳು ಜಲ ಪ್ರಾಧಿಕಾರದ ಜಲ ಪೂರೈಕೆಯ ಫಲಾನುಭವಿಗಳಾಗಿದ್ದು ಕಳೆದ ಅನೇಕ ಕಾಲದಿಂದ ಈ ಬವಣೆಯನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಕುರಿತು ವಿವರವಾದ ಮಾಹಿತಿಗಳೊಂದಿಗೆ ಕೇರಳಾ ಜಲ ಪ್ರಾಧಿಕಾರದ ಸಹಾಯಕ ಅಭಿಯಂತರರಿಗೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ನಾಳೆಯೇ ಸರಿ ಮಾಡಿಸುತ್ತೇನೆಂಬ ಭರವಸೆಯ ಹೊರತು ಇಂದಿನ ವರೆಗೆ ಸಮಸ್ಯೆಗೆ ಪರಿಹಾರವಾಗಿಲ್ಲ ಎಂದು ಜಿಲ್ಲಾಧಿಕಾರಿಗೆ ಮನವಿ ಮೂಲಕ ಸೋಮಶೇಖರ್ ತಿಳಿಸಿದ್ದಾರೆ.
ಪ್ರಸ್ತುತ ಪೂರೈಕೆಯಾಗದ ನೀರಿಗೆ ಜಲ ಶುಲ್ಕ ಪಾವತಿಸದೇ ಇದ್ದ ಬಡ ಬಿಪಿಎಲ್ ಕಾರ್ಡುದಾರರಿಗೆ ನೀರಿನ ಹಳೆಯದು ಇಂತಿಷ್ಟು ಬಾಕಿ ಇದೆ. ನಿಗದಿತ ದಿನದೊಳಗೆ ಪಾವತಿಸದಿದ್ದರೆ ಜಪ್ತಿ ನಡೆಸಲಾಗುವುದೆಂಬ ಎಚ್ಚರಿಕಾ ನೋಟೀಸು ನೀಡಲಾಗಿದೆ. ಇದರಿಂದ ಬಡ ಜನರು ಆತಂಕಿತರಾದ ಕಾರಣ ಜಿಲ್ಲಾಧಿಕಾರಿಗಳು ಅದಾಲತ್ ನಡೆಸಿ ಸಮಸ್ಯೆ ಪರಿಹರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

0 Comments