ಮಂಗಳೂರು: ಎಟಿಎಂ ಕೌಂಟರ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಾಞಂಗಾಡು ಮೂಲದ ಬ್ಯಾಂಕ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತರನ್ನು ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್‌ನ ಅಟೆಂಡರ್ ಆಗಿದ್ದ ಕಾಞಂಗಾಡು ನಿತ್ಯಾನಂದ ಆಶ್ರಮದ ಸಮೀಪದ ನಿವಾಸಿ ಬಾಲಕೃಷ್ಣನ್ (56) ಎಂದು ಗುರುತಿಸಲಾಗಿದೆ.
ಬ್ಯಾಂಕ್‌ನ ದಿನದ ಕರ್ತವ್ಯ ಮುಗಿಸಿದ ಬಳಿಕ ನಗದು ವ್ಯವಹಾರಕ್ಕಾಗಿ ಸಮೀಪದ ಎಟಿಎಂ ಕೌಂಟರ್‌ಗೆ ತೆರಳಿದ್ದ ವೇಳೆ ಬಾಲಕೃಷ್ಣನ್ ಆಕಸ್ಮಿಕವಾಗಿ ಜಾರಿ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಇದೇ ವೇಳೆ ಎಟಿಎಂ ಕೌಂಟರ್‌ನ ಗಾಜು ಒಡೆದು ಅವರ ದೇಹದ ಮೇಲೆ ಬಿದ್ದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿರಬೇಕೆಂದು ಸಂಶಯಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ತಕ್ಷಣ ನೆರವು ದೊರೆಯಲಿಲ್ಲ. ಬಳಿಕ ಎಟಿಎಂಗೆ ಬಂದ ಗ್ರಾಹಕರು ಅವರನ್ನು ಗಾಯಗೊಂಡ ಸ್ಥಿತಿಯಲ್ಲಿ ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಅವರು ನಿಧನರಾದರು.
ಮಂಗಳೂರಿನಲ್ಲಿ ವಾಸವಾಗಿದ್ದ ಬಾಲಕೃಷ್ಣನ್ ವಾರಕ್ಕೊಮ್ಮೆ ಕಾಞಂಗಾಡಿನ ತಮ್ಮ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಅವರು ನಿತ್ಯಾನಂದ ಆಶ್ರಮದ ಸಮೀಪದ ದಿ. ದಾಮೋದರ ಹಾಗೂ ಸರೋಜಿನಿ ದಂಪತಿಯ ಪುತ್ರರಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮಧ್ಯಾಹ್ನ ಕಾಞಂಗಾಡಿಗೆ ತರಲಾಗುವುದು. ಮೃತರು ಪತ್ನಿ ಭಾರತಿ, ಪುತ್ರಿ ಶ್ರದ್ಧಾ ಹಾಗೂ ಸಹೋದರರಾದ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಗಳಾದ ದಿನಕರನ್, ಬಾಲಚಂದ್ರನ್ ಮತ್ತು ವಿದೇಶದಲ್ಲಿ ನೆಲೆಸಿರುವ ಚಂದ್ರಹಾಸ ಎಂಬಿವರನ್ನು ಅಗಲಿದ್ದಾರೆ.

0 Comments