ತಿರುವನಂತಪುರ : ವಯನಾಡಿನ ಮೇಪ್ಪಾಡಿ ಸಮೀಪ ಸಂಭವಿಸಿದ ಭೀಕರ ಭೂಕುಸಿತದ ವೇಳೆ ಸೇತುವೆ ಮೇಲೆ ನಿಂತಿದ್ದ ಟ್ಯಾಂಕರ್ ವಾಹನ ಹಲವರ ಜೀವ ಉಳಿಸಲು ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಭೂಕುಸಿತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಲ್ಲಾಡಿಯ ಮೀನಾಕ್ಷಿ ಸೇತುವೆ ಸಮೀಪ ನಿರ್ಮಾಣ ಹಂತದಲ್ಲಿರುವ ಅನಕ್ಕಂಪೊಯಿಲ್–ಮೇಪ್ಪಾಡಿ ಸುರಂಗ ಮಾರ್ಗ ಯೋಜನೆ ಪ್ರದೇಶದಲ್ಲಿ ಬೆಟ್ಟ ಕುಸಿದು ಅಪಾರ ಪ್ರಮಾಣದ ಮಣ್ಣು, ಬಂಡೆಗಳು ಹಾಗೂ ಕೆಸರು ಏಕಾಏಕಿ ನಿರ್ಮಾಣ ಸ್ಥಳದತ್ತ ಹರಿದುಬಂದಿವೆ. ಈ ವೇಳೆ ಸೇತುವೆಯ ಮೇಲೆ ನಿಂತಿದ್ದ ಟ್ಯಾಂಕರ್ ಮಣ್ಣಿನ ರಭಸವನ್ನು ಭಾಗಶಃ ತಡೆದ ಪರಿಣಾಮ ಹಲವು ಕಾರ್ಮಿಕರು ಮತ್ತು ಸಾರ್ವಜನಿಕರು ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ಭಾರೀ ಪ್ರಮಾಣದ ಮಣ್ಣು ಸಂಪೂರ್ಣ ಪ್ರದೇಶವನ್ನು ಆವರಿಸಿರುವುದು ದೃಶ್ಯಗಳಲ್ಲಿ ಕಾಣಿಸುತ್ತದೆ.
ಸಿಸಿಟಿವಿ ದೃಶ್ಯಗಳಲ್ಲಿ ಭೂಕುಸಿತಕ್ಕೂ ಮುನ್ನ ಸೇತುವೆ ಬಳಿ ಕಾರ್ಮಿಕರು ಹಾಗೂ ಸಾರ್ವಜನಿಕರು ನಿಂತಿರುವುದು, ಬಳಿಕ ಬೆಟ್ಟದಿಂದ ಮಣ್ಣು ಮತ್ತು ಬಂಡೆಗಳು ನೀರಿನ ಹೊಳೆಯಂತೆ ಹರಿದು ಬರುವುದು, ಜನರು ದಿಕ್ಕಾಪಾಲಾಗಿ ಓಡಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಣ್ಣಿನ ರಭಸದಿಂದ ಕೆಲವರು ನೆಲಕ್ಕುರುಳಿರುವ ಹಾಗೂ ಮಣ್ಣಿನಲ್ಲಿ ಸಿಲುಕಿರುವ ದೃಶ್ಯಗಳೂ ದಾಖಲಾಗಿವೆ.
ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೆಲವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯ ರಕ್ಷಣಾ ತಂಡಗಳು ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿವೆ.


0 Comments