ಮುಳ್ಳೇರಿಯ : ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ಲಸ್ ಟು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮುಳ್ಳೇರಿಯ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷಾ (17) ಅವರು ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಚೆಂಗಳದ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ದೀಕ್ಷಾ ಅವರು ಮುಳ್ಳೇರಿಯ ವಿವೇಕಾನಂದ ನಗರದ ನಿವಾಸಿಯಾಗಿದ್ದು, ತಂದೆ ಬಿ. ಕೃಷ್ಣ ಅವರು ಮಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲೇ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ರಾಧಾಮಣಿ. ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಕ್ ಏಕೈಕ ಸಹೋದರ.
ಜೂನ್ 23ರಂದು ಸಂಜೆ ಸುಮಾರು 4 ಗಂಟೆಗೆ ಮುಳ್ಳೇರಿಯ–ಬದಿಯಡ್ಕ ರಸ್ತೆಯ ಗಜಾನನ ಶಾಲೆ ಸಮೀಪ ಈ ದುರ್ಘಟನೆ ಸಂಭವಿಸಿತ್ತು. ನೆರೆಮನೆಯ ನಾಲ್ಕು ವರ್ಷದ ಬಾಲಕ ಶ್ರೇಯಾನ್‌ನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಅತಿ ವೇಗದಲ್ಲಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ದೀಕ್ಷಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಗಾಯಗೊಂಡ ಶ್ರೇಯಾನ್ (4) ಇನ್ನೂ ಇಂದಿರಾ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೀಕ್ಷಾ ಅವರ ಮೃತದೇಹಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬುಧವಾರ ಬೆಳಿಗ್ಗೆ 9 ಗಂಟೆಗೆ ಮುಳ್ಳೇರಿಯ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ನಂತರ ನಿವಾಸಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗುವುದು.

0 Comments