ಅಡೂರು: ಮಗನಿಗೆ ಕಡಿದು ಗಾಯಗೊಳಿಸಿದ ಬಳಿಕ ತಂದೆ ಕಾಡಿನೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಡೂರು ಸಮೀಪದ ಬಳವಂತಡ್ಕದಲ್ಲಿ ನಡೆದಿದೆ. ಅಡೂರು ಬಳವಂತಡ್ಕ ಮೂಲದ ಹಾಗೂ ಅಡೂರು ಮಣಿಯೂರಿನಲ್ಲಿ ವಾಸವಾಗಿದ್ದ ಚಂದ್ರನ್ ಬಿ.ಸಿ. (56) ಮೃತ ವ್ಯಕ್ತಿ. ಅವರು ಇತ್ತೀಚೆಗೆ ಗೃಹಪ್ರವೇಶ ನಡೆದ ಪತ್ನಿಯ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಶುಕ್ರವಾರ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಚಂದ್ರನ್, ಪುತ್ರ ಅರುಣ್ ಜೊತೆ ಮಾತಿನ ಚಕಮಕಿ ನಡೆಸಿದ್ದು, ಅದು ತೀವ್ರಗೊಂಡ ವೇಳೆ ಕತ್ತಿಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಅರುಣ್ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ಯುವಾಗ ಚಂದ್ರನ್ ಕೂಡ ಅವರೊಂದಿಗೆ ತೆರಳಿದ್ದರೆಂದು ತಿಳಿದುಬಂದಿದೆ.
ನಂತರ ಮನೆಗೆ ಮರಳಿದ ಚಂದ್ರನ್ ಬಳವಂತಡ್ಕಕ್ಕೆ ತೆರಳಿದ್ದರು. ನಿನ್ನೆ ಬೆಳಗ್ಗೆ ಮನೆಯಿಂದ ಹೊರಟ ಅವರು, ಮಧ್ಯಾಹ್ನ 3.30ರ ಸುಮಾರಿಗೆ ಬಳವಂತಡ್ಕದ ಕಾಡಿನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ದಿ. ಚನಿಯ ನಾಯಕ್ ಮತ್ತು ಲಕ್ಷ್ಮಿ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಭವಾನಿ. ಮಕ್ಕಳಾದ ಸಂಧ್ಯಾ, ಅರುಣ್, ಲೋಹಿತ್ ಹಾಗೂ ಸವಿತಾ,. ಅಳಿಯ ಪ್ರವೀಣ್. ಸಹೋದರರಾದ ಕೇಶವ, ಉದಯ ಹಾಗೂ ಸಹೋದರಿ ಅನಿತಾ ಎಂಬಿವರನ್ನು ಅಗಲಿದ್ದಾರೆ.

0 Comments