ಕಣ್ಣೂರು : ಕೇರಳದ ವಿವಿಧ ಜ್ಯುವೆಲ್ಲರಿಗಳಲ್ಲಿ ಆನ್‌ಲೈನ್ ಹಣ ಪಾವತಿಯ ನಕಲಿ ಸ್ಕ್ರೀನ್‌ಶಾಟ್ ತೋರಿಸಿ ಚಿನ್ನ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಪಾಪ್ಪಿನಿಶೇರಿಯ ಅಭಿಷೇಕ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಳಿಪರಂಬ ಡಿವೈಎಸ್‌ಪಿ ಟಿ.ಪಿ. ಸುಮೇಶ್ ಅವರ ನೇತೃತ್ವದ ವಿಶೇಷ ತನಿಖಾ ತಂಡವು ಗುರುವಾರ ರಾತ್ರಿ 10 ಗಂಟೆಗೆ ಎರ್ನಾಕುಳಂ ಕಲೂರಿನಲ್ಲಿರುವ ಆತನ ವಾಸಸ್ಥಳದಿಂದ ಆರೋಪಿಯನ್ನು ಬಂಧಿಸಿದೆ.
ಆ.13ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀಕಂಠಾಪುರಂ ಪಾರಂಬುಳದ ಜ್ಯುವೆಲ್ಲರಿಗೆ ತೆರಳಿದ್ದ ಆರೋಪಿ, ತಾನು ಶ್ಯಾಮ್ ಕೃಷ್ಣನ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ 5.970 ಗ್ರಾಂ ಹಾಗೂ 23.990 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಖರೀದಿಸಿ, ಹಣ ಪಾವತಿಸದೆ ನಕಲಿ ಪಾವತಿ ಸ್ಕ್ರೀನ್‌ಶಾಟ್ ತೋರಿಸಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಜ್ಯುವೆಲ್ಲರಿ ಮಾಲೀಕರು ಆರೋಪಿಯನ್ನು ಫೋನ್ ಮೂಲಕ ಸಂಪರ್ಕಿಸಿದಾಗ, ಅಭಿಷೇಕ್ ಇ.ಜಿ. ಎಂಬಾತನ ಖಾತೆಯಿಂದ ರೂ.58,000 ಪಾವತಿಸಿದ್ದಾನೆ. ಉಳಿದ ರೂ.4,00,500 ಪಾವತಿಸದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

0 Comments