ಅಡೂರು : ಅಡಕೆ ಹೆಕ್ಕಲು ತೋಟಕ್ಕೆ ತೆರಳಿದ್ದ ಗೃಹಿಣಿಯ ಮೃತದೇಹ ತೋಟದ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. ಪಾಂಡಿ ಮಲ್ಲಂಬಾರ ತೆಮ್ಮನಗುಂಡಿಯ ದಿ. ಚೋಮ್ಮಣ್ಣ ನಾಯ್ಕ್ ಅವರ ಪತ್ನಿ ಗುಲಾಬಿ ಬಾಯಿ (66) ಮೃತಪಟ್ಟವರು.
ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ಮನೆಯ ಸಮೀಪದ ತೋಟಕ್ಕೆ ಅಡಕೆ ಹೆಕ್ಕಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಗುಲಾಬಿ ಬಾಯಿ ಬಳಿಕ ನಾಪತ್ತೆಯಾಗಿದ್ದರು. ಬಹಳ ಸಮಯವಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ, ತೋಟದ ಸಮೀಪದ ತೋಡಿನ ಬದಿಯಲ್ಲಿ ಅವರ ಚಪ್ಪಲಿಗಳು ಪತ್ತೆಯಾಗಿದ್ದವು.
ಸ್ಥಳೀಯರು ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕುಟ್ಟಿಕೋಲ್‌ನಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಹುಡುಕಾಟದ ವೇಳೆ ತೋಟದಿಂದ ಸ್ವಲ್ಪ ದೂರದಲ್ಲಿರುವ ತಿಮ್ಮನಗುಂಡಿ ತೋಡಿನಲ್ಲಿ ಗುಲಾಬಿ ಬಾಯಿಯ ಮೃತದೇಹ ಪತ್ತೆಯಾಯಿತು.
ಆದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರು ಮಕ್ಕಳಾದ ಶಾರದಾ ಮತ್ತು ಜನಾರ್ದನ, ಅಳಿಯ ಶಂಕರ, ಸೊಸೆ ರೇವತಿ ಎಂಬಿವರನ್ನು ಅಗಲಿದ್ದಾರೆ.

0 Comments