ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ಬ್ಯಾಂಕ್ ಎದುರೇ ತಮ್ಮ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ, ಬಳಿಕ ಮನೆಗೆ ತೆರಳಿ ಸಹೋದರಿಯನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಗಸ್ಟ್ 20ರಂದು ಗೋಮತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯ ಬಳಿ ಘಟನೆ ನಡೆದಿದೆ. ಮೃತರನ್ನು ದಿವ್ಯಾ ಮಿಶ್ರಾ ಎಂದು ಗುರುತಿಸಲಾಗಿದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಅವರನ್ನು ಪತಿ ಮಾನಸ್ ವಾಜಪೇಯಿ ಕರೆ ಮಾಡಿ ಹೊರಗೆ ಬರುವಂತೆ ತಿಳಿಸಿದ್ದರು.
ದಿವ್ಯಾ ಹೊರಗೆ ಬಂದ ಬಳಿಕ ಇಬ್ಬರೂ ಕೆಲಕಾಲ ಮಾತನಾಡಿದ್ದು, ನಂತರ ಮಾನಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದಾದ ಬಳಿಕ ಮಾನಸ್, ಸಹೋದರಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಬರೆದಿದ್ದಾನೆ ಎನ್ನಲಾಗಿದೆ. ಮಾಹಿತಿ ಆಧರಿಸಿ ಪೊಲೀಸರು ಮನೆಗೆ ತೆರಳಿ ಪರಿಶೀಲಿಸಿದಾಗ, ಮಾನಸ್ ಹಾಗೂ ಆತನ ಸಹೋದರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ನಡುವೆ, ದಿವ್ಯಾ ಅವರ ಸಹೋದರಿ ಪ್ರಗ್ಯಾ ಮಿಶ್ರಾ, ಪತಿ ಮಾನಸ್ ದಿವ್ಯಾಗೆ ಹಲವು ಬಾರಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೊಳೆತ ಟೊಮ್ಯಾಟೋ ವಿಚಾರಕ್ಕೂ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದ ಎಂದು ಅವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

0 Comments