ಬದಿಯಡ್ಕ : ಕರುವಲ್ತಡ್ಕ–ನಾರಂಪಾಡಿ–ನೆಕ್ರಂಪಾರ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ರಸ್ತೆ ಹಾಗೂ ಪೊಡಿಪಳ್ಳ–ಬೆಳಿಂಜ–ನಾಟೆಕಲ್ಲು ರಸ್ತೆಯ ಆಧುನೀಕರಣಕ್ಕೆ ಕುಂಬ್ಡಾಜೆ ಜನಕೀಯ ಸಮಿತಿ ನಡೆಸಿದ ನಿರಂತರ ಹೋರಾಟಕ್ಕೆ ಫಲ ದೊರೆತಿದೆ.
ಈ ಕುರಿತು ಸಾರ್ವಜನಿಕ ಕಾಮಗಾರಿಗಳ ಇಲಾಖೆಯು ಜನಕೀಯ ಸಮಿತಿಗೆ ನೀಡಿದ ಅಧಿಕೃತ ಉತ್ತರದಲ್ಲಿ, ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಪ್ರಾಥಮಿಕ ಅಂದಾಜು ವೆಚ್ಚ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಸರ್ಕಾರದಿಂದ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ದೊರೆತ ಕೂಡಲೇ ಯೋಜನೆಯ ಮುಂದಿನ ಕ್ರಮಗಳನ್ನು ಆರಂಭಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ರಸ್ತೆ ಮೂರು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಾಲೆಗಳು, ಕುಟುಂಬ ಆರೋಗ್ಯ ಕೇಂದ್ರ, ಪಂಚಾಯಿತಿ ಕಚೇರಿ, ಗ್ರಾಮ ಕಚೇರಿ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಿರುವುದರಿಂದ ಸಾವಿರಾರು ಜನರು ಪ್ರತಿದಿನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಕ್ಕಟ್ಟಾದ ರಸ್ತೆ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ಜನಕೀಯ ಸಮಿತಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ರಸ್ತೆ ಅಗಲೀಕರಣ ಮಾಡಿ ಆಧುನಿಕ ಗುಣಮಟ್ಟದಲ್ಲಿ ಮೆಕಡಂ ಹಾಗೂ ಡಾಂಬರೀಕರಣ ನಡೆಸುವಂತೆ ಸಮಿತಿ ನಿರಂತರವಾಗಿ ಒತ್ತಾಯಿಸುತ್ತಿತ್ತು.
ರಾಜಕೀಯ ಭೇದಭಾವ ಮರೆತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಒಗ್ಗಟ್ಟಿನಿಂದ ನಡೆಸಿದ ಪ್ರಯತ್ನವೇ ಈ ಸಾಧನೆಗೆ ಕಾರಣವಾಗಿದೆ ಎಂದು ಜನಕೀಯ ಸಮಿತಿ ತಿಳಿಸಿದೆ. ಯೋಜನೆಗೆ ಶೀಘ್ರದಲ್ಲೇ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಜನಕೀಯ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.


0 Comments