ಮಾನ್ಯ : ಸ್ವಾತಂತ್ರ್ಯ ಹೋರಾಟ ಕಾಲದಿಂದಲೇ ಗಣೇಶ ಚತುರ್ಥಿಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಮಷ್ಠಿಯಲ್ಲಿ ಆಚರಣೆಗೆ ತಂದ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮಯೋಜಿತ ಆಲೋಚನೆ ಇಂದು ಸನಾತನ ಧರ್ಮಕ್ಕೊಂದು ಮೈಲುಗಲ್ಲಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು. ಅವರು ಕಾರ್ಮಾರಿನಲ್ಲಿ ಗಣೇಶೋತ್ಸವ ಪೂರ್ವಭಾವಿಯಾಗಿ ನಡೆದ ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕರ್ಮ ದೇವನ ಪ್ರೀತಾರ್ಥಕ್ಕೆ ಪ್ರಕೃತಿಯೊಂದಿಗಿನ ಸಮ್ಮಿಳಿತದ ಈ ಉತ್ಸವ ನಾಡಿನ ಜನ ಸಹಭಾಗಿತ್ವಕ್ಕೆ ಸಾಕ್ಷಿಯಾಗಲಿ ಎಂದರು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಆಶೀರ್ವಚನ ನೀಡುತ್ತಾ ಭೂಮಿ ತಾಯಿಯ ಮಡಿಲಲ್ಲಿ ಮಕ್ಕಳೆಲ್ಲ ಸೇರಿ ಆಟವಾಡುವುದೇ ಸೊಬಗು ಇದು ಸ್ಪರ್ಧೆಯಲ್ಲ ಪರಸ್ಪರ ಸೌಹರ್ದತೆಯ ಸಂಕೇತವಾಗಲಿ ಎಂದರು. ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದ್ದರು.ಡಾ. ಶ್ರೀನಿಧಿ ಸರಳಾಯ, ಬದಿಯಡ್ಕ,ಕಾರ್ಮಾರು ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕ್ಕೋಳಿ, ನರಸಿಂಹ ಭಟ್, ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕುಂಜ, ಬದಿಯಡ್ಕ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ , ಜನಪ್ರತಿನಿಧಿ ಶ್ಯಾಮ್ ಪ್ರಸಾದ್ ಮೇಗಿನಡ್ಕ, ನೀರ್ಚಾಲು ಶಾಲಾ ಎನ್ನೆಸ್ಸಸ್ ಯೋಜನಾಧಿಕಾರಿ ಹರೀಶ್ ಮಾಸ್ತರ್,ಧ.ಗ್ರಾ.ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣಾ, ಸುಂದರ ಶೆಟ್ಟಿ ಕೊಲ್ಲಂಗಾನ ಹಾಗೂ ಸಂತೋಷ್ ಕುಮಾರ್ ಎಸ್. ಮಾನ್ಯ, ಶ್ರೀ ಮಹಾವಿಷ್ಣು ಯುವಕ ವೃಂದದ ಅಧ್ಯಕ್ಷ ಪುರುಷೋತ್ತಮ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು. ವಿಜಯ ಕುಮಾರ್ ಮಾನ್ಯ ಸ್ವಾಗತಿಸಿ
ಯುವಕ ವೃಂದದ ಕಾರ್ಯದರ್ಶಿ ಶಶಿಕಾಂತ್ ಶೆಟ್ಟಿ ಕಾರ್ಮಾರು ವಂದಿಸಿದರು. ಮಾನ್ಯ ಜೆ.ಎ.ಎಸ್.ಬಿ. ಶಾಲೆ, ಮುಖ್ಯೋಪಾಧ್ಯಾಯ ಸುರೇಂದ್ರನ್ ಎಂ.ವಿ.ಹಾಗೂ ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ನಿರೂಪಿಸಿದರು. ಶಾಂಭವಿ ಚಂದ್ರಹಾಸ ಶೆಟ್ಟಿ, ಮುಳ್ಳೇರಿಯ ಇವರ ಕಾಜೆ ಮತ್ತು ಜನ್ನ ಹೆಸರಿನ ಕಂಬಳದ ಕೋಣಗಳು ಉದ್ಘಾಟನಾ ಕಾರ್ಯಕ್ರಮದಿಂದ ಸಂಜೆ ವರೆಗೆ ಗದ್ದೆಯಲ್ಲಿ ತುಳುನಾಡಿನ ಕಂಬಳದ ದ್ಯೋತಕವಾಗಿ ಗಮನ ಸೆಳೆದವು. ವಿವಿಧ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಮಕ್ಕಳ ನೃತ್ಯ ,ಮಹಿಳೆಯರ ಪಾರ್ದನ ಹಾಡು ಮನರಂಜನೆ ನೀಡಿತು.ಮಧ್ಯಾಹ್ನ ಕ್ಷೇತ್ರ ಪರಿಸರದಲ್ಲಿ ಗ್ರಾಮೀಣ ಸೊಗಡಿನ ಭಕ್ಷ್ಯ ಭೋಜನವನ್ನು ನೆರೆದ ನೂರಾರು ಜನತೆ ಸವಿದರು.
ಗದ್ದೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹಾಗೂ ದಂಪತಿಗಳಿಗಾಗಿ ವಿವಿಧ ಸಾಂಪ್ರದಾಯಿಕ ಹಾಗೂ ಮನರಂಜನಾ ಸ್ಪರ್ಧೆಗಳಲ್ಲಿ ಹಲವರು ಪಾಲ್ಗೊಂಡರು.



0 Comments