Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ ಪೇಟೆಯ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರದ ಗೆಲ್ಲು ಧರಾಶಾಹಿ

ಪೆರ್ಲ : ಪೇಟೆಯ ರಸ್ತೆ ಬದಿಯಲ್ಲಿ ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ಬೆಳೆದು ನಿಂತಿರುವ ಬೃಹತ್ ಗಾತ್ರದ ಮರಗಳು ಹಾಗೂ ಅಪಾಯಕಾರಿ ಗೆಲ್ಲುಗಳು ಸಾರ್ವಜನಿಕರ ನಿದ್ದೆಗೆಡಿಸಿದ್ದು ನಿನ್ನೆ ರಾತ್ರಿ ಪೆರ್ಲ ಬದಿಯಡ್ಕ ರಸ್ತೆಯ ವ್ಯಾಪಾರಿ ಭವನದ ಮುಂದಿರುವ ಮರದ ಗೆಲ್ಲು ಮುರಿದು ಬಿದ್ದಿದ್ದು ಅಪಾಯ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇಲ್ಲಿಂದ ಮುಂದುವರಿದರೆ ಮುಂದೆ ಉಕ್ಕಿನಡ್ಕ, ಗೋಳಿಯಡಿ, ಕರಿಂಬಿಲ ಭಾಗದ ಹೆಚ್ಚಿನ ಕಡೆಗಳಲ್ಲೂ ಭಾರೀ ಗಾತ್ರದ ಮರಗಳು ರಸ್ತೆ ಸಂಚಾರಕ್ಕೆ ಸಂಚಕಾರವನ್ನೊಡ್ಡುವಂತಾಗಿದೆ. ಗಾಳಿ-ಮಳೆಯ ಸಂದರ್ಭದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಗೆಲ್ಲುಗಳು ಮುರಿದು ಬೀಳುವ ಆತಂಕ ಎದುರಾಗಿದ್ದು, ರಸ್ತೆ ಮೂಲಕ ಸಂಚರಿಸುವವರ ಸುರಕ್ಷತೆಯೇ ಪ್ರಶ್ನಾರ್ಥಕವಾಗಿದೆ.

ವಿಶೇಷವಾಗಿ ಮಳೆಗಾಲದಲ್ಲಿ ಬಲವಾದ ಗಾಳಿ ಬೀಸಿದಾಗ ಮರಗಳ ಕೊಂಬೆಗಳು ಮುರಿದು ಬೀಳುವುದು ಸಾಮಾನ್ಯವಾಗಿದ್ದು, ಈಗಾಗಲೇ ಹಲವು ಬಾರಿ ಇಂತಹ ಘಟನೆಗಳು ಸಂಭವಿಸಿವೆ ಎನ್ನಲಾಗಿದೆ. ನಿನ್ನೆ ರಾತ್ರಿ ಬೀಸಿದ ಬಿರುಸಿನ ಗಾಳಿಗೂ ಮರದ ಬೃಹತ್ ಗೆಲ್ಲೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದಿದ್ದರೂ, ಬಿದ್ದ ಗೆಲ್ಲನ್ನು ಸ್ಥಳೀಯ ನಾಗರಿಕರೇ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಸ್ತೆಯ ಪಕ್ಕದಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿರುವ ಮರಗಳು ಹಾಗೂ ಒಣಗಿದ ಕೊಂಬೆಗಳು ಯಾವುದೇ ಮುನ್ಸೂಚನೆಯಿಲ್ಲದೆ ಧರಾಶಾಯಿಯಾಗುವ ಸಾಧ್ಯತೆಯಿದೆ. ಜನನಿಬಿಡ ಪೇಟೆಯಲ್ಲಿ ಇಂತಹ ಮರಗಳ ಕೆಳಗೆ ವಾಹನಗಳು ನಿಲ್ಲಿಸುವುದು ಹಾಗೂ ಪಾದಚಾರಿಗಳು ಸಂಚರಿಸುವುದು ಅಪಾಯಕಾರಿಯಾಗಿದ್ದು, ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಎಣ್ಮಕಜೆ ಪಂಚಾಯತಿಗೊಳಪಡುವ ಪೆರ್ಲ ಪೇಟೆಯ ರಸ್ತೆ ಬದಿಯ ಅಪಾಯಕಾರಿ ಮರಗಳು ಹಾಗೂ ಗೆಲ್ಲುಗಳನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ ಎಂಬ ಸಾರ್ವಜನಿಕ ಒತ್ತಾಯ ಕೇಳಿ ಬಂದಿದೆ.

Post a Comment

0 Comments

ಜಾಹೀರಾತು

Responsive Advertisement