Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಕ್ಕಿನಡ್ಕದಿಂದ ಸೇರಾಜೆಯ ಯುವಕನ ಅಪಹರಣ; ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಬೆದರಿಕೆ; ₹1.02 ಲಕ್ಷ ದೋಚಿದ ಆರೋಪ : ಐವರ ವಿರುದ್ಧ ಕೇಸು

ಕಾಸರಗೋಡು : ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಬಾಲಕನೊಂದಿಗೆ ಬೆತ್ತಲಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿದ ಬಳಿಕ ಪೋಕ್ಸೊ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ 1.02 ಲಕ್ಷ ರೂ  ದೋಚಿದ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ನೀಡಿದ ದೂರಿನ ಆಧಾರದಲ್ಲಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಆಗಸ್ಟ್ 29ರಂದು ಸಂಜೆ 6 ಗಂಟೆ ಸುಮಾರಿಗೆ ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ಈ  ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಪ್ರಕರಣದ ವಿವರಗಳ ಪ್ರಕಾರ, ಉಕ್ಕಿನಡ್ಕದಲ್ಲಿ ಸುಜಿತ್ ಅವರನ್ನು ಐವರ ತಂಡವೊಂದು ಮರದ ದೊಣ್ಣೆ ತೋರಿಸಿ ಬೆದರಿಸಿ, ಬಳಿಕ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಚೆರ್ಕಳ ಸಮೀಪದ ಕ್ವಾರ್ಟರ್ಸ್‌ಗೆ ತಲುಪಿಸಿದೆ. ಅಲ್ಲಿನ ಕೊಠಡಿಯಲ್ಲಿ ಅವರನ್ನು ಕೂಡಿ ಹಾಕಿ ಬೆದರಿಕೆ ಹಾಕಿದ ಬಳಿಕ ಬಟ್ಟೆ ಬಿಚ್ಚಿಸಿ, ಕೊಠಡಿಯಲ್ಲಿದ್ದ ಅಪ್ರಾಪ್ತ ಬಾಲಕನೊಂದಿಗೆ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಡಿಯೋವನ್ನು ಬಳಸಿಕೊಂಡು ಪೋಕ್ಸೊ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಸುಜಿತ್ ಅವರಿಂದ 1,02,000 ರೂ. ಹಣವನ್ನು ಪಡೆದುಕೊಂಡು, ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿ ಗುರುತು ಪತ್ತೆಯಾಗಿರುವ ಐವರು ಆರೋಪಿಗಳ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘಟನೆ ನಡೆದ ಸ್ಥಳಗಳು ಹಾಗೂ ಆರೋಪಿಗಳು ಸಂಚರಿಸಿರಬಹುದಾದ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ.

ಪ್ರಕರಣದ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಆರೋಪಿಗಳ ನಡುವಿನ ಸಂಬಂಧ ಹಣದ ವ್ಯವಹಾರ ಸೇರಿದಂತೆ ವಿವಿಧ ಆಯಾಮಗಳಲ್ಲಿ  ತನಿಖೆ ನಿರತರಾಗಿದ್ದಾರೆಂದು ತಿಳಿದು ಬಂದಿದೆ.

Post a Comment

0 Comments

ಜಾಹೀರಾತು

Responsive Advertisement