ಬದಿಯಡ್ಕ : ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪೆರಡಾಲ ಕೊರಗ ಉನ್ನತಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಉನ್ನತಿಯ ಸದಸ್ಯರಿಗೆ ಓಣಂ ಹಬ್ಬದ ಉಡುಗೊರೆಗಳನ್ನು ವಿತರಿಸಲಾಯಿತು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರಮಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಡಜನರೊಂದಿಗೆ ಸದಾ ಬೆರೆಯಬೇಕೆಂಬ ನರೇಂದ್ರ ಮೋದಿಯವರ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡವರು, ಶೋಷಿತರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ಮೂಡಿಸುವುದೇ ಭಾರತೀಯ ಜನತಾ ಪಕ್ಷದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ, ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ ಬದಿಯಡ್ಕ, ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅನಿತಾ ನಾಯಕ್ ಹಾಗೂ ಕಾರ್ಯಕರ್ತ ಸಾಯಿ ಪ್ರಣವ್ ಪಾಲ್ಗೊಂಡಿದ್ದರು.
ಬಿಜೆಪಿ ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರೇಮಲತಾ ವಂದಿಸಿದರು.
ಓಣಂ ಹಬ್ಬದ ಪ್ರಯುಕ್ತ ಉನ್ನತಿಯ ಎಲ್ಲ ಕುಟುಂಬಗಳಿಗೆ ಸಿಹಿತಿಂಡಿ ಹಾಗೂ ಹಿರಿಯರು ಮತ್ತು ಅಶಕ್ತರಿಗೆ ಹೊಸ ಬಟ್ಟೆಗಳನ್ನು ವಿತರಿಸಿ, ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

0 Comments