ಕಾಸರಗೋಡು : ಕೊಚ್ಚಿಯಲ್ಲಿ ನಡೆದ ಮಲಯಾಳಿ ಮಾಸ್ಟರ್ಸ್ ರಾಜ್ಯ ಅಥ್ಲೆಟಿಕ್ ಮೀಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾಸರಗೋಡಿನ ಪಿ. ಆಯಿಷತ್ ತಾಹಿರಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾರೆ.
30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ ಆಯಿಷತ್ ತಾಹಿರಾ, 200 ಮೀಟರ್ ಓಟವನ್ನು 31.40 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಲ್ಲದೆ 400 ಮೀಟರ್ ಓಟ, 4×100 ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲೂ ಚಿನ್ನದ ಪದಕ ಗೆದ್ದು ತಮ್ಮ ವೇಗ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಿದರು.
100 ಮೀಟರ್ ಓಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಒಟ್ಟಾರೆ ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳೊಂದಿಗೆ ಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದರು.
ವಿಶೇಷವೆಂದರೆ, ಯಾವುದೇ ಅತ್ಯಾಧುನಿಕ ಅಥವಾ ನಿರಂತರ ತರಬೇತಿ ಸೌಲಭ್ಯಗಳ ನೆರವಿಲ್ಲದೆಯೇ ಆಯಿಷತ್ ತಾಹಿರಾ ಈ ಗಮನಾರ್ಹ ಸಾಧನೆ ಮಾಡಿರುವುದು ಅವರ ಕ್ರೀಡಾ ಪ್ರತಿಭೆ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಎಣ್ಮಕಜೆ ಪಂಚಾಯತ್ ನ ಮಣಿಯಂಪಾರೆ ಸಮೀಪದ ಪೆರ್ದನೆ ನಿವಾಸಿ ಹಾಗೂ ಮಾಜಿ ರಾಜ್ಯ ಕಬಡ್ಡಿ ಆಟಗಾರ ರಝಾಕ್ - ಮೈಮೂನ ದಂಪತಿಗಳ ಪುತ್ರಿಯಾಗಿರುವ ಆಯಿಷತ್ ತಾಹಿರಾ, ಬೋವಿಕ್ಕಾನ, ಆಲೂರಿನ ಜಂಶೀದ್ ಅವರ ಪತ್ನಿಯಾಗಿದ್ದಾರೆ.
ಕಬಡ್ಡಿ ಕ್ರೀಡಾಪಟುವಿನ ಪುತ್ರಿಯಾಗಿ ಬೆಳೆದ ಆಯಿಷತ್ ತಾಹಿರಾ ಶೇಣಿ ಶ್ರೀಶಾರದಾಂಬ ಶಾಲಾ ಹಳೆ ವಿದ್ಯಾರ್ಥಿಯಾಗಿದ್ದಾರೆ. ಶಾಲಾ ಕ್ರೀಡಾ ಕೂಟದಲ್ಲೂ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೀಗ ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿರುವುದು ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಸೀಮಿತ ತರಬೇತಿಯ ನಡುವೆಯೂ ರಾಜ್ಯಮಟ್ಟದಲ್ಲಿ ಐದು ಪದಕಗಳನ್ನು ಗೆದ್ದಿರುವ ಅವರ ಸಾಧನೆ, ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ಇನ್ನಷ್ಟು ಎತ್ತರಕ್ಕೆ ಏರಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂಬುದನ್ನು ತೋರಿಸಿದೆ. ಜನವರಿ 5ರಂದು ಕೊಯಂಬುತ್ತೂರಿನಲ್ಲಿ ದೇಶಿಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ.

0 Comments