Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುತ್ತಾರಿನಲ್ಲಿ ಭೀಕರ ಅಪಘಾತ: ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

ಉಳ್ಳಾಲ : ಗಣೇಶ ಚತುರ್ಥಿಯಂದು ಕುತ್ತಾರು ಕೊರಗಜ್ಜನ ಆದಿಕ್ಷೇತ್ರದ ಬಳಿ ನಡೆದ ಬೈಕ್-ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ. ವೈದ್ಯರ ಸಲಹೆಯ ಮೇರೆಗೆ ಯುವಕನ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕುತ್ತಾರುವಿನ ಆಯೆರೆಬೆಟ್ಟು ನಿವಾಸಿಗಳಾದ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮೆದುಳು ನಿಷ್ಕ್ರಿಯಗೊಂಡ ಯುವಕ.

ಸೋಮವಾರ ರಾತ್ರಿ ಸುಮಾರು 7.30ಕ್ಕೆ ವರ್ಷಿತ್ ಕುತ್ತಾರುವಿನಿಂದ ಮನೆಗೆ ತೆರಳುತ್ತಿದ್ದ ವೇಳೆ ಕೊರಗಜ್ಜನ ಆದಿಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್‌ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ವರ್ಷಿತ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು.

ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ವೈದ್ಯರು ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದಾರೆ.

ವೈದ್ಯರ ಸಲಹೆಯಂತೆ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ವರ್ಷಿತ್ ಅವರ ಕಿಡ್ನಿ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ವಿವಿಧ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, ಇಂದು ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಅಂಗಾಂಗಗಳನ್ನು ಸಂಬಂಧಿತ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಪಘಾತದಲ್ಲಿ ಸ್ಕೂಟರ್ ಸವಾರ ಧೀರಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ಷಿತ್ ಅವಿವಾಹಿತರಾಗಿದ್ದು, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಅಗಲಿದ್ದಾರೆ. ಘಟನೆ ಕುರಿತು ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement