Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಗಣೇಶ ವಿಗ್ರಹ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 6 ವಿದ್ಯಾರ್ಥಿಗಳು ದಾರುಣ ಸಾವು

                                                                    ಸಾಂದರ್ಭಿಕ ಚಿತ್ರ

ಹೈದರಾಬಾದ್ : ಗಣೇಶ ಚತುರ್ಥಿ ಆಚರಣೆ ಹಾಗೂ ವಿಗ್ರಹ ವಿಸರ್ಜನೆ ವೇಳೆ ಸಂಭವಿಸಿದ ದುರಂತದಲ್ಲಿ ಆರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ವಿಗ್ರಹ ವಿಸರ್ಜನೆಗಾಗಿ ಕೆರೆಗೆ ಇಳಿದಿದ್ದ ವೇಳೆ ವಿಗ್ರಹ ಏಕಾಏಕಿ ವಾಲಿ ವಿದ್ಯಾರ್ಥಿಗಳ ಮೇಲೆ ಬಿದ್ದ ಪರಿಣಾಮ ಅವರು ನೀರಿನಲ್ಲಿ ಮುಳುಗಿದ್ದಾರೆ. ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳು ಈಜಿ ಪಾರಾಗಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ಪಟಾನ್‌ಚೆರು ಮಂಡಲದ ಇಂದ್ರೇಶಂ ಪುರಸಭೆ ವ್ಯಾಪ್ತಿಯ ಶಿರೀಷ ಟ್ರಸ್ಟ್ ಆಶ್ರಮದ ವಿದ್ಯಾರ್ಥಿಗಳು ಮೃತಪಟ್ಟವರು. ಬುಧವಾರ ಸಂಜೆ ಪೆದ್ದಕಂಚರ್ಲಾ ಪ್ರದೇಶದ ‘ನೇರೆಡ್ ಚೆರುವು’ ಕೆರೆಯಲ್ಲಿ ಘಟನೆ ನಡೆದಿದೆ.

ಮೃತರನ್ನು ಪೂರ್ವ ಗೋದಾವರಿ ಜಿಲ್ಲೆಯ ನರಸಿಂಹ ರಾಜು (22), ಖಮ್ಮಂ ಜಿಲ್ಲೆಯ ಸುಮಂತ್ ರೆಡ್ಡಿ (17), ವಾರಂಗಲ್ ಜಿಲ್ಲೆಯ ಗಣೇಶ್ (18), ಸಿದ್ಧಾರ್ಥ್ (17), ಬಿಎಚ್‌ಇಎಲ್ ಟೌನ್‌ಶಿಪ್‌ನ ಶ್ಯಾಮ್ ಕುಮಾರ್ (17) ಹಾಗೂ ಸಂಗಾರೆಡ್ಡಿಯ ಉದಯ್ ಕಿರಣ್ (17) ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಆಶ್ರಮದ ವಿದ್ಯಾರ್ಥಿಗಳು ಇದೇ ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡುತ್ತಿದ್ದರು. ಕೆರೆಯ ಆಳವಾದ ಭಾಗಕ್ಕೆ ತೆರಳದಂತೆ ಆಶ್ರಮದ ವಾರ್ಡನ್ ಹಾಗೂ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಆದರೆ ಎಂಟು ವಿದ್ಯಾರ್ಥಿಗಳು ವಿಗ್ರಹದೊಂದಿಗೆ ಕೆರೆಯ ಆಳವಾದ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ವಿಗ್ರಹದ ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿ ನೀರಿನಲ್ಲಿದ್ದ ವಿದ್ಯಾರ್ಥಿಗಳ ಮೇಲೆಯೇ ಬಿದ್ದಿದೆ. ವರ್ಷಿತ್ ಹಾಗೂ ಅಖಿಲ್ ಎಂಬ ಇಬ್ಬರು ವಿದ್ಯಾರ್ಥಿಗಳು ಈಜಿ ಪಾರಾಗಿದ್ದಾರೆ. ಉಳಿದ ಆರು ಮಂದಿ ವಿಗ್ರಹದ ಅಡಿಯಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿದ್ದಾರೆ.

ಅಪಘಾತದ ಬಳಿಕ ಸ್ಥಳೀಯರು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಪಟಾನ್‌ಚೆರುವಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸಿಪಿಆರ್ ಸೇರಿದಂತೆ ತುರ್ತು ಚಿಕಿತ್ಸೆಗೆ ಪ್ರಯತ್ನಿಸಿದರೂ ಆರು ಮಂದಿಯೂ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಘಟನೆಗೆ ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲ, ಮುಖ್ಯಮಂತ್ರಿ ರೇವಂತ್ ರೆಡ್ಡಿ, ಸಚಿವ ಪೊನ್ನಂ ಪ್ರಭಾಕರ್, ಮಾಜಿ ಸಚಿವ ಹರೀಶ್ ರಾವ್ ಹಾಗೂ ಶಾಸಕ ಗುಡೇಂ ಮಹಿಪಾಲ್ ರೆಡ್ಡಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ.

Post a Comment

0 Comments

ಜಾಹೀರಾತು

Responsive Advertisement