ಮಂಗಳೂರು: ತಲೆಬುರುಡೆಯ ತಳಭಾಗದಲ್ಲಿ ಅತ್ಯಂತ ಅಪಾಯಕಾರಿ ಸ್ಥಳದಲ್ಲಿದ್ದ ಅಪರೂಪದ ಗಡ್ಡೆಯನ್ನು 15 ವರ್ಷದ ಬಾಲಕನಿಂದ ಯಶಸ್ವಿಯಾಗಿ ತೆರವುಗೊಳಿಸುವ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯರ ತಂಡ ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿದೆ.
ಕಾಸರಗೋಡು ಜಿಲ್ಲೆಯ ಸಂಜಯ್ ಕುಮಾರ್ ಎಂಬ ಬಾಲಕನಿಗೆ ಜುವೆನೈಲ್ ನಾಸೊಫ್ಯಾರಿಂಜಿಯಲ್ ಆಂಜಿಯೋಫೈಬ್ರೋಮಾ ಎಂಬ ಅಪರೂಪದ ಗಡ್ಡೆ ಪತ್ತೆಯಾಗಿತ್ತು. ಕ್ಯಾನ್ಸರ್ ಅಲ್ಲದಿದ್ದರೂ ಸ್ಥಳೀಯವಾಗಿ ಆಕ್ರಮಣಕಾರಿಯಾಗಿ ಬೆಳೆಯುವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ರಕ್ತನಾಳಗಳನ್ನು ಹೊಂದಿರುವ ಈ ಗಡ್ಡೆ ತಲೆಬುರುಡೆಯ ತಳಭಾಗದಲ್ಲಿ ಬೆಳೆದಿತ್ತು.ಗಡ್ಡೆಯು ಇಂಟರ್ನಲ್ ಕ್ಯಾರೋಟಿಡ್ ಸೈಫನ್ ಹಾಗೂ ಆಪ್ಟಿಕ್ ನರದ ಅತ್ಯಂತ ಸಮೀಪದಲ್ಲಿದ್ದ ಕಾರಣ, ಶಸ್ತ್ರಚಿಕಿತ್ಸೆ ವೇಳೆ ಭಾರೀ ರಕ್ತಸ್ರಾವ, ಪಾರ್ಶ್ವವಾಯು ಹಾಗೂ ದೃಷ್ಟಿ ಕಳೆದುಕೊಳ್ಳುವಂತಹ ಗಂಭೀರ ಅಪಾಯಗಳು ಎದುರಾಗಿದ್ದವು.ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಡಾ. ಅಜಯ್ ಕುಮಾರ್ ನೇತೃತ್ವದ ಬಹುವಿಭಾಗೀಯ ವೈದ್ಯರ ತಂಡ ಮಾಡಿಫೈಡ್ ಮ್ಯಾಕ್ಸಿಲ್ಲರಿ ಸ್ವಿಂಗ್ ವಿಧಾನ ಬಳಸಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಶಸ್ತ್ರಚಿಕಿತ್ಸೆಯ ಬಳಿಕ ಬಾಲಕನ ದೃಷ್ಟಿ ಹಾಗೂ ಪ್ರಮುಖ ನರಗಳ ಕಾರ್ಯಕ್ಷಮತೆ ಸುರಕ್ಷಿತವಾಗಿದ್ದು, ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.ಅತ್ಯಂತ ಸೂಕ್ಷ್ಮ ನರಗಳು ಮತ್ತು ಪ್ರಮುಖ ರಕ್ತನಾಳಗಳ ಸಮೀಪದಲ್ಲಿದ್ದ ಗಡ್ಡೆಯನ್ನು ಸುರಕ್ಷಿತವಾಗಿ ತೆರವುಗೊಳಿಸಿರುವುದು ಈ ಶಸ್ತ್ರಚಿಕಿತ್ಸೆಯ ಪ್ರಮುಖ ವಿಶೇಷತೆಯಾಗಿದೆ.

0 Comments