ಪೆರ್ಲ : ಕರಾಡ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಪೆರ್ಲ ಇದರ ಆಶ್ರಯದಲ್ಲಿ ‘ಕರಾಡವಾಣಿ’ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸದಸ್ಯರ ಸಮಾವೇಶವು ಪೆರ್ಲದ ಭಾರತಿ ಸದನದಲ್ಲಿ ಯಶಸ್ವಿಯಾಗಿ ಜರಗಿತು. ಬೆಳಿಗ್ಗೆ ಸದಸ್ಯರ ನೋಂದಾವಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ನಡೆದ ಸಮಾರಂಭವನ್ನು ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ಉದ್ಘಾಟಿಸಿದರು. ಕೃಷ್ಣ ಭಟ್ ಪಿಲಿಂಗಲ್ಲು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಾಗರ್ ಶಿರಂತಡ್ಕ ಸ್ವಾಗತಿಸಿ, ರಾಜಾರಾಮ ಪೆರ್ಲ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು. ಗಣಪತಿ ಭಟ್ ಶೆಟ್ಟಿಬೈಲು ವಂದಿಸಿದರು. ನಂತರ ಡಾ. ದುರ್ಗಾ ಪ್ರಸಾದ್ ಆನೆಮಜಲು ಅವರ ಸಂಯೋಜನೆಯಲ್ಲಿ ‘ಕರಾಡವಾಣಿ ಕಥಾ-ಕಥನ’ ಜರುಗಿತು. ಇದರಲ್ಲಿ ಕೃಷ್ಣ ಭಟ್ ಪಿಲಿಂಗಲ್ಲು, ಅರುಣಾ ಶಿವರಾಂ ಪಡುಪ್ಪು, ದಿವ್ಯಾ ಶಿರಂತಡ್ಕ, ಎಸ್. ಎನ್. ಭಟ್ ಸೈಪಂಗಲ್ಲು ಹಾಗೂ ನಳಿನಿ ಸೈಪಂಗಲ್ಲು ಅವರು ಪತ್ರಿಕೆಯ ಹಾದಿ ಮತ್ತು ನೆನಪುಗಳನ್ನು ಮೆಲಕು ಹಾಕಿದರು. ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆಯೊಂದಿಗೆ ರಮೇಶ್ ಮಾಣಿಮೂಲೆ ಅವರ ಸಂಯೋಜನೆಯಲ್ಲಿ ಉಪಯುಕ್ತ ಸಂವಾದ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನದ ನಂತರ, ಪತ್ರಿಕೆಯ ಉಪಸಂಪಾದಕ ಹಾಗೂ, ರಾಜ್ಯ ಮಟ್ಟದ ತರಬೇತುದಾರ ಎಸ್. ಎನ್. ಭಟ್ ಸೈಪಂಗಲ್ಲು ಅವರ ನೇತೃತ್ವದಲ್ಲಿ ಸಂಪಾದಕ ಮಂಡಳಿಯೊಂದಿಗೆ ಮುಖಾಮುಖಿ ಹಾಗೂ ಮಾತುಕತೆ ಗೋಷ್ಠಿ ನಡೆಯಿತು. ಇಪ್ಪತೈದರ ಹರೆಯದ ಸಂಭ್ರಮದಲ್ಲಿರುವ ಕರಾಡ ವಾಣಿಗೆ ಸಮಸ್ತ ಓದುಗರು ಭಾವನಾತ್ಮಕ ಪದಪುಂಜಗಳ ಮೂಲಕ ಅಭಿನಂದಿಸುವ ಕರಾಡ ವಾಣಿ ಕೃತಜ್ಞತಾ ಕಲಶವನ್ನು ಗೌರವಯುತವಾಗಿ ಪೂರ್ಣಗೊಳಿಸಲಾಯಿತು. “ಹಳೆಯ ಸಂಚಿಕೆ, ಹೊಸ ಸಂಭ್ರಮ" ದ ಅಂಗವಾಗಿ ಸದಸ್ಯರು ಸಂಗ್ರಹಿಸಿದ ಸಂಚಿಕೆಗಳನ್ನು ಆಧರಸಿ ಹಳೆಯ ಕಾಲದ ಸಂಚಿಕೆ ಸಂಗ್ರಹಿಸಿದವರನ್ನು ನೆನಪಿನ ಕಾಣಿಕೆಕೊಟ್ಟು ಬಹುಮಾನಿಸಲಾಯಿತು. ಬಳಿಕ ನಡೆದ ಚಿಂತನ-ಮಂಥನ ಹಾಗೂ ಪತ್ರಿಕೆಯ ಬೆಳವಣಿಗೆಗೆ ಪೂರಕವಾದ ಅಂಶಗಳ ಕುರಿತು ಸದಸ್ಯರು ಮುಕ್ತವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಸಮಾರೋಪ ಸಮಾರಂಭದಲ್ಲಿ ಸದಸ್ಯರಿಂದ ಸಮಾವೇಶದ ಕುರಿತು ಅನಿಸಿಕೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾದವು. ಪೋಷಕರಾದ ಬಾಲ ಮುರಳಿ ಕೊಮ್ಮುಂಜೆ ಹಿತನುಡಿಗಳನ್ನಾಡಿದರು, ಕೋಟೆರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಮೈಕಾನ ಸ್ವಾಗತಿಸಿ, ಅರುಣಾ ಶಿವರಾಂ ಪಡುಪ್ಪು ವಂದಿಸಿದರು.

0 Comments